     ಎಲ್ಲಾ ಕಡೆ ಕ್ಲೋರೊಫಿಲ್ ಚಿ ಯನ್ನು ಕ್ಲೋರೊಫಿಲ್ a ಎಂದು ಬದಲಿಸಿ
ಆಲ್ಗೆ

ಥಾಲ್ಲೊಫೈಟ ಗುಂಪಿಗೆ (ಗ್ರೀಕ್ ಪದ ಥಾಲ್ಲಸ್ ಅಂದರೆ ಎಳೆಕೊನರು, ಫೈಟಾನ್ ಅಂದರೆ ಒಂದು ಗಿಡ) ಸೇರಿದ ಕನಿಷ್ಠ ದರ್ಜೆಯ ಸಸ್ಯ. ಪಾಚಿ, ಶೈವಲ, ಶಿಲಾವಲ್ಕ ಮತ್ತು ಸಾಮಾನ್ಯ ಭಾಷೆಯಲ್ಲಿ ಜಲಕುಸುಮ (ವಾಟರ್ ಬ್ಲೂಮ್), ಕಪ್ಪೆಯ ಉಗುಳು, ಮಾಸಸ್ ಪರ್ಯಾಯನಾಮಗಳು, ತೇವಪೂರಿತ ಪ್ರದೇಶಗಳಿಂದ ತೊಡಗಿ ವಿಶಾಲಸಾಗರಗಳವರೆಗೆ ವಿವಿಧ ಉಷ್ಣತಾವಲಯಗಳಲ್ಲಿ ವಿವಿಧ ಎತ್ತರ ಆಳಗಳಲ್ಲಿ ಆಲ್ಗೆ ಸಸ್ಯಗಳ ವ್ಯಾಪ್ತಿ ಇದೆ. ಹೊಸ ನೀರಿನ ಕೊಳದ ತಳದ ತೆಳುಲೇಪ, ಕಲ್ಲುಬಂಡೆಗಳ ಮರದ ಕಾಂಡಗಳ ಮೇಲಿನ ಹೆಸರು ಕರೆಗಳು, ಸಾಗರಗಳ ಮಹಾ ಕಳೆಗಳು (ಸಮುದ್ರಕಳೆ-ಸೀ ವೀಡ್) ಎಲ್ಲವೂ ಆಲ್ಗೆಯ ವಿವಿಧ ರೂಪಗಳು. ಸಸ್ಯವಿಜ್ಞಾನಿಗಳು ಆಲ್ಗೆಯನ್ನು ಅತ್ಯಂತ ಪುರಾತನ ಮತ್ತು ಮೂಲ ರೂಪದ ಸಸ್ಯವೆಂದು ತಿಳಿದರೆ ಇದರ ಕೆಲವು ವಿಭಾಗಗಳಾದರೂ ಪ್ರಾಣಿವರ್ಗಕ್ಕೆ ಸೇರಿವೆಯೆಂದು ಪ್ರಾಣಿಶಾಸ್ತ್ರಜ್ಞರು ಸಾಧಿಸುತ್ತಾರೆ. ಆಲ್ಗೆಯ ವಿವಿಧ ಪ್ರಭೇಧಗಳು ಪ್ರದರ್ಶಿಸುವ ಗುಣಲಕ್ಷಣಗಳು ಇಂಥ ತರ್ಕಕ್ಕೆ ಎಡೆ ಮಾಡಿಕೊಟ್ಟಿವೆ-ಸ್ವಯಂಚಾಲನೆ ಇರುವ ಆಲ್ಗೆಗಳಿವೆ, ಇಲ್ಲದವೂ ಇವೆ. ಉನ್ನತದರ್ಜೆಯ ಸಸ್ಯಗಳನ್ನು ಹಲವಾರು ಆಲ್ಗೆಗಳು ತೋರಿಕೆಗೆ ಹೋಲುತ್ತವಾದರೂ ಈ ಆಲ್ಗೆಗಳಿಗೆ ನಿಜವಾದ ಎಲೆಗಳಿಲ್ಲ, ಕಾಂಡಗಳಿಲ್ಲ, ಬೇರುಗಳಿಲ್ಲ, ನಾಳವ್ಯವಸ್ಥೆಯೂ (ವಾಸ್ಕ್ಯುಲರ್ ಸಿಸ್ಟಂ) ಇಲ್ಲ. 

ಪ್ರಾಪ್ತಿ ಮತ್ತು ವಿತರಣೆ : ಸಿಹಿನೀರಿನ ಆಲ್ಗೆ ಮತ್ತು ಉಪ್ಪುನೀರಿನ ಆಲ್ಗೆ ಎಂಬ ಸ್ಥೊಲ ವಿತರಣೆ ಆಲ್ಗೆಯ ಪ್ರಾಪ್ತಿ ಸ್ಥಾನವನ್ನು ಕುರಿತು ಇದೆ. ಸುಮಾರು 18,000 ಬಿನ್ನ ಪ್ರಭೇದಗಳಿರುವ ಅಲ್ಗೆ ಸಸ್ಯದಲ್ಲಿನ ಪ್ರತಿ ಪ್ರಭೇದವನ್ನೂ ಈ ಎರಡು ವಿಂಗಡಣೆಗಳಲ್ಲಿ ಒಂದರಲ್ಲಿ ಗುರುತಿಸಬಹುದು. ಒಟ್ಟಾಗಿ ಪರಿಶೀಲಿಸುವಾಗ ಸಿಹಿ ನೀರಿನ ಮತ್ತು ಉಪ್ಪು ನೀರಿನ ಆಲ್ಗೆಗಳು ಪ್ರದರ್ಶಿಸುವ ವೈವಿಧ್ಯ-ಅತಿ ಸರಳತೆಯಿಂದ ಬಲು ಸಂಕೀರ್ಣತೆ ವರೆಗೆ-ಬೆರಗುಗೊಳಿಸುವಂತಿದೆ. 

ವರ್ಗೀಕರಣ : ವರ್ಣ ಪದಾರ್ಥಗಳ ರಾಸಾಯನಿಕ ಸ್ವಭಾವ, ಕಣಗಳಲ್ಲಿ ಶೇಖರವಾಗಿರುವ ಆಹಾರ ಪದಾರ್ಥಗಳ ಸಮ್ಮಿಳನ, ಚಲನಾಂಗಗಳ ವೈವಿಧ್ಯ, ಕಣ ಭಿತ್ತಿಯ ರಾಸಾಯನಿಕ ರಚನೆ, ಸಂತಾನೋತ್ಪತ್ತಿ ವಿಧಾನಗಳು-ಇವನ್ನು ಆಧರಿಸಿ ಆಲ್ಗೆ ಸಸ್ಯಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ. 

1. ಸೈಯನೋಫೈಸಿ (ನೀಲಿ ಹಸಿರು ಆಲ್ಗೆಗಳು ) : ಜೀವಕಣದ ಒಳರಚನೆ ಬಲು ಸರಳ. ಈ ಶೈವಲದಲ್ಲಿ ನೈಜಕಣಬೀಜ ಮತ್ತು ಕ್ರೊಮಟೋಫೋರ್‍ಗಳು ಇರುವುದಿಲ್ಲ. ಇದರ ಕಣಗಳಲ್ಲಿರುವ ಕಣದ್ರವ್ಯವನ್ನು ಎರಡು ವಿಭಾಗಗಳಾಗಿ ನೋಡುತ್ತೇವೆ-ವರ್ಣದ್ರವ್ಯಗಳು, ತೈಲವಸ್ತುಗಳು ಮತ್ತು ನೀಲಹರಿತ ಶೈವಾಲೀಯ ಪಿಷ್ಟವನ್ನು ಒಳಗೊಂಡಿರುವ (ಪೆರಿಫೆರಲ್ ಪಿಗ್‍ಮೆಂಟೆಡ್ ರೀಜನ್ ಟುಗೆದರ್ ವಿತ್ ಆಯ್ಲ್ ಡ್ರಾಪ್ಸ್) ಪರಿಧಿಯ ಸಮೀಪದ ಹೊರವಿಭಾಗ ; ವರ್ಣ ದ್ರವ್ಯರಹಿತ ನಡುವಣ ವಿಭಾಗ. ಈ ವರ್ಣದ್ರವ್ಯದಲ್ಲಿ ಪತ್ರಹರಿತ್ತು ಎ. ಕೆರೊಟೀನ್, ಮಿಕ್ಸೊಸೆಂತೀನ್, ಮಿಕ್ಸೊಸೆಂತೊಫಿಲ್, ಫೈಕೊಸಯನಿನ್ ಮತ್ತು ಫೈಕೊ ಇರಿತ್ರಿನ್ ಇವೇ ಮೊದಲಾದ ವಸ್ತುಗಳಿವೆ. ಅವುಗಳಲ್ಲಿ ಲಿಂಗಕಣಗಳಾಗಲಿ ಚಲಿಸುವ ಕಣಗಳಾಗಲಿ ಇರುವುದಿಲ್ಲ. ಈ ಸಸ್ಯಗಳು ಒಮ್ಮೊಮ್ಮೆ ಆಕಸ್ಮಿಕವಾಗಿ ತುಂಡಾಗುವುದರ ಮೂಲಕ ಸಂತಾನೋತ್ಪತ್ತಿ ಕ್ರಿಯೆ ನಡೆಯುವುದು. ಇವುಗಳ ಇನ್ನು ಕೆಲವು ಪ್ರೆಭೇದಗಳಲ್ಲಿ ವಿಶೇಷ ಕಣಗಳು ರೂಪಗೊಂಡು ಅವು ಈ ಕ್ರಿಯೆಯನ್ನು ನಡೆಸುತ್ತವೆ. 

2. ಕ್ಲೋರೊಫೈಸಿ (ಹಸಿರು ಬಣ್ಣದ ಆಲ್ಗೆಗಳು) : ಇವುಗಳಲ್ಲಿ ಉಚ್ಚವರ್ಗದ ಸಸ್ಯಗಳಲ್ಲಿರುವಷ್ಟೇ ಪ್ರಮಾಣದ ಮತ್ತು ವ್ಯತ್ಯಾಸಹೊಂದುವ ವರ್ಣಗ್ರಾಹಿಗಳಲ್ಲಿರುವ ವರ್ಣದ್ರವ್ಯಗಳಿವೆ. ಇವು ಸಂಗ್ರಹಿಸಿಡುವ ಪ್ರಮುಖ ಆಹಾರ ವಸ್ತು ಪಿಷ್ಟ ಪದಾರ್ಥಗಳು. ಈ ವರ್ಗದ ಬಹುಪಾಲು ಸಸ್ಯಗಳು ಸಮಯುಗ್ಮ, ಅಸಮಯುಗ್ಮ ಮತ್ತು ವಿಷಮಯುಗ್ಮ ಗ್ಯಾಮೀಟುಗಳಿಂದ ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತವೆ. ಇವುಗಳಲ್ಲಿ ವಿವಿಧ ಗಾತ್ರದ ಚಲಿಸುವ ಕಣಗಳಿದ್ದು ಅವುಗಳಲ್ಲಿ ಎರಡು ನಾಲ್ಕು ಅಥವಾ ಅನೇಕ ಕಶಾಂಗಗಳಿವೆ (ಮಲ್ಟಿಫ್ಲಾಗೆಲ್ಲೇಟ್).

3. ಯುಫೈಸಿ : ನಿಶ್ಚಿತಕಣ ಬೀಜವಿದೆ. ವರ್ಣದ್ರವ್ಯಗಳಲ್ಲಿ ಪತ್ರ ಹರಿತ್ತು ಇದೆ ಮತ್ತು ಅದರಲ್ಲಿನ ನಿರ್ದಿಷ್ಟ ವರ್ಣಗ್ರಾಹಿಗಳಲ್ಲಿ ಕಿರೊಟಿನಾಯಿಡ್ ಎಂಬ ವಸ್ತುಗಳಿವೆ. ಪಿಷ್ಟಜಾತಿಗೆ ಸೇರಿದ ಆದರೆ ಕರಗದ ಪ್ಯಾರಾಮೈಲಿಯಂ ಎಂಬ ಕಾರ್ಬೋಹೈಡ್ರೇಟ್ ಮತ್ತು ಮೇದಸ್ಸು ಪದಾರ್ಥಗಳು ಇವು ಸಂಗ್ರಹಿಸುವ ಮುಖ್ಯ ಆಹಾರವಸ್ತುಗಳು. ಇದರ ಎಲ್ಲ ಕಣಗಳಿಗೆ ಹೊರಪೊರೆ ಇರುವುದಿಲ್ಲ. ಈ ಏಕಕಣಯುಕ್ತ ಕಶಾಂಗಿಗಳಲ್ಲಿ (ಯೂನಿಸೆಲ್ಲುಲರ್ ಫ್ಲಾಜೆಲ್ಲೇಟ್ಸ್) ಒಂದು, ಎರಡು ಇನ್ನು ಕೆಲವೊಮ್ಮೆ ಮೂರು ಕಶಾಂಗಗಳು ಇರುವುವು. ಸಾಮಾನ್ಯವಾಗಿ ನೀಳ ಕಣವಿಭಜನೆಯ ಮೂಲಕ ಇವು ಸಂತಾನೋತ್ಪತ್ತಿ ಕ್ರಿಯೆಯನ್ನು ನಡೆಸುತ್ತವೆ. ಆದರೆ ಇದರ ಒಂದು ಪ್ರಭೇದ ಈ ನಿಯಮಕ್ಕೆ ಅಪವಾದವಾಗಿದ್ದು ಲಿಂಗ ರೀತಿಯಲ್ಲಿ ತನ್ನ ಸಂತಾನೋತ್ಪತ್ತಿಯನ್ನು ನಡೆಸುವುದು. 

4. ಕ್ಸಾಂತೊಫೈಸಿ (ಹಳದಿ ಹಸಿರು ಬಣ್ಣದ ಆಲ್ಗೆಗಳು) : ಮುಖ್ಯವಾಗಿ ಸಿಹಿನೀರಿನಲ್ಲಿ ಬೆಳೆಯುತ್ತವೆ. ಆದರೆ ಕೆಲವು ಕಡಲಿನ ಉಪ್ಪು ನೀರಿನಲ್ಲಿ ಬೆಳೆಯುವುದೂ ಉಂಟು. ಇದರ ಸಸ್ಯಾಂಗ ಏಕಕಣಯುಕ್ತವಾಗಿರಬಹುದು ಅಥವಾ ಬಹುಕಣಯುಕ್ತವಾಗಿರಬಹುದು. ಇದರ ಕಣಭಿತ್ತಿ ಮುಖ್ಯವಾಗಿ ಪೆಕ್ಟಿಕ್ ವಸ್ತುಗಳಿಂದ ಸಂಯೋಜನೆಗೊಂಡಿರುವುದು. ಅವುಗಳಲ್ಲಿ ಪತ್ರಹರಿತ್ತು ವಿರಳ. ಕಣಗಳಲ್ಲಿ ಅನೇಕ ಉರುಟಾದ ಕ್ರೊಮಟೋಫೋರ್‍ಗಳಿವೆ. ಕ್ಸಾಂತೊಫಿಲ್ ಎಂಬ ವರ್ಣದ್ರವ್ಯ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆಲ್ಗೆಯ ಬಣ್ಣ ಹಳದಿ-ಹಸಿರು. ಸಾಮಾನ್ಯವಾಗಿ ಇವುಗಳಲ್ಲಿ ಪೈರಿನಾಯಿಡುಗಳು ಇರುವುದಿಲ್ಲ. ಮೇದಸ್ಸು ಅಥವಾ ಲ್ಯೊಕೋಸಿನ್ ಪದಾರ್ಥಗಳು ಇವು ಸಂಗ್ರಹಿಸುವ ಪ್ರಮುಖ ಆಹಾರ ವಸ್ತುಗಳು. ಪಿಷ್ಟವನ್ನು ತಯಾರಿಸುವುದಿಲ್ಲ. ಗ್ಯಾಮಿಟುಗಳಲ್ಲಿ ಎರಡು ಕಶಾಂಗಗಳಿದ್ದು ಅವುಗಳ ಉದ್ದ ಭಿನ್ನ. ಇವು ಕಶಾಂಗಗಳಿರುವ ಅಥವಾ ಕಶಾಂಗಗಳಿಲ್ಲದ ಚಲಬೀಜಾಣುಗಳನ್ನು ಉದ್ಭವಿಸಿ ಅವುಗಳ ಮೂಲಕ ತಮ್ಮ ಸಂತಾನೋತ್ಪತ್ತಿ ಕ್ರಿಯೆಯನ್ನು ನಡೆಸುತ್ತವೆ. 

5. ಬ್ಯಾಸಿಲೇರಿಯೋಫೈಸಿ (ಡೈಆಟಮ್ಸ್, ಸುವರ್ಣ ಹಸಿರು ಆಲ್ಗೆಗಳು): ಇವುಗಳಿಗೆ ಸಾಮಾನ್ಯ ಹೆಸರು ಡೈಆಟಮ್ಸ್, ಬೆಳವಣಿಗೆ ವಿವಿಧ ಪರಿಸರಗಳಲ್ಲಿ : ಸಿಹಿನೀರು, ಉಪ್ಪು ನೀರು, ತೇವವಿರುವ ಮಣ್ಣು, ಮರಗಳ ತೊಗಟೆಗಳು, ಕಲ್ಲು ಬಂಡೆಗಳ ಇಳಿಜಾರುಗಳು ಇತ್ಯಾದಿ ತಾಣಗಳು. ಸಾಮಾನ್ಯವಾಗಿ ಒಂದೇ ಕಣವುಳ್ಳ ದ್ವಿಗುಣಿತ ಸಸ್ಯಾಂಗ ಪಡೆದಿವೆ. ಏಕಜೀವಿಯಾಗಿರಬಹುದು ಅಥವಾ ಸಂಘಜೀವಿಯಾಗಿರಬಹುದು. ಎರಡು ಅರ್ಧಭಾಗಗಳಿಂದ ಸಂಗತವಾಗಿ ಜೋಡಣೆಗೊಂಡಿರುವ ಡೈಆಟಮ್‍ಗಳ ಆಕಾರಗಳು ಬೇರೆ ಬೇರೆ. ಇವುಗಳಲ್ಲಿ ಪೆಕ್ಟಿಕ್ ವಸ್ತುಗಳಿಂದ ರಚನೆಗೊಂಡ ಕಣಭಿತ್ತಿಗಳಿವೆ. ಅದರಲ್ಲಿ ಸಿಲಿಕಾಕಣಗಳು ಹೇರಳವಾದ್ದರಿಂದ ಚಿಪ್ಪು ಬಲು ಸುಂದರವಾಗಿ ಕಾಣುವುದು. ಇವುಗಳ ಆಕಾರ ಭಿತ್ತಿಗಳಲ್ಲಿನ ರೇಖೆಗಳು ಅವುಗಳ ವರ್ಗೀಕರಣದ ದೃಷ್ಟಿಯಿಂದ ಪ್ರಮುಖ. ಈ ಡೈಆಟಮ್ ಕಣಗಳು ಸತ್ತ ಮಣ್ಣಿನ ಹೆಸರು ಡೈಆಟಮಿನ ಮಣ್ಣು. ಇದಕ್ಕೆ ಹೆಚ್ಚಿನ ಆರ್ಥಿಕಮೌಲ್ಯ ಇದೆ. ಡೈಆಟಮ್ ಕಣಗಳಲ್ಲಿ ಕೇವಲ ಒಂದೇಕಣಬೀಜವಿದೆ. ಇವುಗಳ ಕ್ರೋಮಟೋ ಫೋರ್‍ಗಳಲ್ಲಿ ವರ್ಣ ದ್ರವ್ಯವಿದೆ. ಅವುಗಳ ಆಕಾರ ಮತ್ತು ಸಂಖ್ಯೆಗಳಲ್ಲಿ ಹೆಚ್ಚು ಕಮ್ಮಿಯಿರಬಹುದು. ಇದರಲ್ಲಿರುವ ಕಂದು-ಸುವರ್ಣ ಬಣ್ಣದ ವರ್ಣದ್ರವ್ಯವಾದ ಡೈಆಟಮಿನ್ ಎಂಬ ವಿಶೇಷ ವರ್ಣದ್ರವ್ಯ ಅದರಲ್ಲಿರುವ ಪತ್ರಹರಿತ್ತನ್ನು ಮಸಕುಗೊಳಿಸುವುದು. ಮೇದಸ್ಸು ಪದಾರ್ಥ ಇದರಲ್ಲಿ ಸಂಗ್ರಹಗೊಳ್ಳುವ ಪ್ರಮುಖ ಆಹಾರವಸ್ತು. ಜೊತೆಗೆ ಕರಗದ ಅನಿಶ್ಚಿತ ರಾಸಾಯನಿಕ ಸಂಯೋಜನೆಯುಳ್ಳ ವೊಲ್ಯುಟಿನ್ ಎಂಬ ವಿಶೇಷ ಆಹಾರವಸ್ತುವೂ ಇದರಲ್ಲಿ ಸಂಗ್ರಹಗೊಳ್ಳುವುದುಂಟು. ಇವುಗಳಲ್ಲಿ ಸಾಮಾನ್ಯವಾಗಿ ಕಣವಿಭಜನೆಯ ಮೂಲಕ ಸಂತಾನೋತ್ಪತ್ತಿಕ್ರಿಯೆ ನಡೆಯುವುದು. ಆದರೆ ಈ ಕಣಗಳು ಅನುಕ್ರಮವಾಗಿ ವಿಭಜನೆಯಾಗುತ್ತ ಹೋದಂತೆ ಅವುಗಳ ಗಾತ್ರ ಚಿಕ್ಕದಾಗುತ್ತ ಹೋಗುವುದು. ಆಗ ಅವು ಆಕ್ಸೊಸ್ಟೋರುಗಳೆಂಬ ವಿಶೇಷ ರೀತಿಯ ಪುನರ್ನಿರ್ಮಾಣಕಣಗಳನ್ನು ಸೃಷ್ಟಿಸಿ ಆ ಮೂಲಕ ತಮ್ಮ ಮೂಲಗಾತ್ರವನ್ನು ಕಾಯ್ಡಿಟ್ಟುಕೊಳ್ಳುತ್ತವೆ. ಲಿಂಗರೀತಿಯಲ್ಲಿ ಅಥವಾ ನಿರ್ಲಿಂಗ ರೀತಿಯಲ್ಲಿನ ಸಂತಾನೋತ್ಪತ್ತಿ ಕ್ರಿಯೆಯ ಮೂಲಕ ಈ ಆಕ್ಸೊಸ್ಪೋರುಗಳು ಉದ್ಬವಿಸುವುವು. 

6. ಪೇರೋಫೈಸಿ (ಬೆಂಕಿ ಆಲ್ಗೆ) : ಹೆಚ್ಚಿನವು ಏಕಕಣಜೀವಿ ಸಸ್ಯಗಳು. ಎರಡು ಕಶಾಂಗಗಳಿವೆ. ಅವೆರಡರ ಉದ್ದ ಒಂದೇ ರೀತಿ ಇಲ್ಲ. ಇವುಗಳಲ್ಲಿ ಕೆಲವು ಏಕಕಣ ಸಸ್ಯಗಳು, ಸಂಘಜೀವಿ ಶೈವಲದಂಥ ಸ್ವರೂಪ ಇದೆ. ಇವುಗಳಲ್ಲಿ ಡಿನೋಸೆಂತೀನ್, ಡೈಯಡಿನೊ ಸೆಂತೀನ್ ಮತ್ತು ಪೆರಿಡಿನಿನ್ ಎಂಬ ವರ್ಣದ್ರವ್ಯಗಳಿರುವುದರಿಂದ ಇದರಲ್ಲಿರುವ ಕ್ರೊಮಾಟೋಫೋರುಗಳು ಹಳದಿ-ಹಸಿರು ಬಣ್ಣದಿಂದ ಕಂದು ಸುವರ್ಣಬಣ್ಣಕ್ಕೆ ತಿರುಗುವುವು. ಪಿಷ್ಟ ಅಥವಾ ಪಿಷ್ಟದಂಥ ಸಂಯುಕ್ತ ವಸ್ತುಗಳು ಅಥವಾ ತೈಲಪದಾರ್ಥಗಳು ಇವು ಸಂಗ್ರಹಿಸುವ ಪ್ರಮುಖ ಆಹಾರವಸ್ತುಗಳು. ಸಂತಾನೋತ್ಪತ್ತಿಕ್ರಿಯೆ ಕಣವಿಭಜನೆಯ ಮೂಲಕ ಸಾಮಾನ್ಯವಾಗಿದ್ದರೂ ಕೆಲವು ಪ್ರಭೇದಗಳಲ್ಲಿ ಲಿಂಗರೀತಿಯಲ್ಲಿಯೂ ನಡೆಯುತ್ತದೆ. ಇಂಥವಲ್ಲಿ ಚಲಬೀಜಾಣುಗಳು ಉದ್ಬವಿಸುವುದೂ ಕಂಡುಬಂದಿದೆ. 

7. ಫಿಯೋಫೈಸಿ (ಕಂದು ಬಣ್ಣದ ಆಲ್ಗೆಗಳು) : ಕಣಗಳಲ್ಲಿ ನಿರ್ದಿಷ್ಟ ಕಣಬೀಜ, ಕಣದ್ರವ್ಯ ಮತ್ತು ಹರಿತಾಣುಗಳಿವೆ. ಹರಿತಾಣುಗಳಲ್ಲಿ ಸಾಮಾನ್ಯ ದ್ಯುತಿ ಸಂಶ್ಲೇಷಕ ವರ್ಣದ್ರವ್ಯಗಳಾಗಿರುವ ಪತ್ರಹರಿತ್ತು-ಎ, ಕೆರೊಟೀನ್ ಮತ್ತು ಸೆಂತೊಫಿಲ್‍ಗಳೆಂಬ ವರ್ಣದ್ರವ್ಯಗಳಿವೆ. ಅವು ಹಳದಿ ಸುವರ್ಣ ಬಣ್ಣದ ಫ್ಯೊಕೋ ಸೆಂತೀನ್ ಎಂಬ ವರ್ಣದ್ರವ್ಯದಿಂದ ಮಸುಕುಗೊಂಡಿರುತ್ತವೆ. ಸರಳ ರೂಪದ ಸಕ್ಕರೆಗಳು, ಆಲ್ಕೊಹಾಲ್ ಮನ್ನಿಟಾಲ್ ಮತ್ತು ಲ್ಯಾಮಿನಾರಿನ್‍ನಂಥ ಸಂಕೀರ್ಣ ಸಾಕ್ಕರಾಯಿಡ್‍ಗಳನ್ನು ಇವು ಸಂಗ್ರಹಿಸಿಡಬಹುದು; ಅಥವಾ ವಿವಿಧ ರೂಪದ ಮೇದಸ್ಸು ಪದಾರ್ಥಗಳನ್ನು ಶೇಖರಿಸಬಹುದು. ಪಿಯರ್ ಹಣ್ಣಿನಾಕಾರದ ಚಲನಸಾಮಥ್ರ್ಯವುಳ್ಳ ಸಂತಾನೋತ್ಪಾದಕ ಕಣಗಳು ಇವುಗಳಲ್ಲಿವೆ. ಇವುಗಳಲ್ಲಿ ಸಮಯುಗ್ಮ ಗ್ಯಾಮಿಟುಗಳ ಅಥವಾ ವಿಷಮಯುಗ್ಮ ಗ್ಯಾಮಿಟುಗಳ ಸಂಯೋಗದ ಮೂಲಕ ಸಂತಾನೋತ್ಪತ್ತಿಕ್ರಿಯೆ ನಡೆಯುವುದು. 

8. ರೋಡೋಫೈಸಿ (ಕೆಂಪುಬಣ್ಣದ ಆಲ್ಗೆಗಳು) : ಕೇವಲ ಕೆಲವು ಬಹುಕಣ ಬೀಜಗಳಿರುವ ಕಣಗಳಿದ್ದರೂ ಅವುಗಳಲ್ಲಿ ಹೆಚ್ಚಿನ ಕಣಗಳಲ್ಲಿ ಕೇವಲ ಒಂದೇ ಕಣ ಬೀಜವಿರುವುದು. ರಚನೆ ಉಚ್ಚರೀತಿಯದು. ಅವುಗಳ ಕಣದ್ರವ್ಯದಲ್ಲಿ ಒಂದು ಅಥವಾ ಅನೇಕ ವರ್ಣಗ್ರಾಹಿಗಳು ತೇಲುತ್ತಿವೆ. ಅವುಗಳಲ್ಲಿ ಫೈಕೊ ಇರಿತ್ತೀನ್ ಎಂಬ ಕೆಂಪುವರ್ಣದ್ರವ್ಯದ ಜೊತೆಗೆ ಪತ್ರಹರಿತ್ತೂ ಇರುವುದು ಅಲ್ಲದೆ ಅದರಲ್ಲಿ ಫಾಯಿಕೊಸಯಾನಿನ್ ಎಂಬ ನೀಲಿ ವರ್ಣದ್ರವ್ಯವೂ ಇದೆ. ಇವುಗಳಲ್ಲಿ ಆಲ್ಕೊಹಾಲಿನ ಪದಾರ್ಥದ ರೂಪದಲ್ಲಿ ಆಹಾರವಸ್ತುಗಳು ಸಂಗ್ರಹಗೊಳ್ಳುತ್ತವೆ. ಆದರೆ ಮುಖ್ಯವಾಗಿ ಪಾಲಿಸಾಕ್ಕರಾಯಿಡ್‍ಗಳ ಸ್ವರೂಪದಲ್ಲಿ ಅವು ತಮ್ಮ ಆಹಾರ ವಸ್ತುಗಳನ್ನು ಸಂಗ್ರಹಿಸುತ್ತವೆ. ಈ ಆಹಾರಪದಾರ್ಥ ವರ್ಣಗ್ರಾಹಿಗಳಲ್ಲಿ ಇರದೆ ಚಿಕ್ಕಪುಟ್ಟ ಹರಳುಗಳ ರೂಪದಲ್ಲಿ ಕಣದ್ರವ್ಯದಲ್ಲಿ ಸ್ವತಂತ್ರವಾಗಿ ವ್ಯಾಪಿಸಿದೆ. ಅದಕ್ಕೆ ಪ್ಲಾರಿಡಿಯನ್ ಪಿಷ್ಟವೆಂದು ಹೆಸರು. ಈ ಸಸ್ಯಾಂಗ ತನ್ನ ತುದಿಭಾಗದಿಂದ ಬೆಳೆಯುತ್ತ ಹೋಗುವುದು. ಜೊತೆಯಲ್ಲೇ ಮಧ್ಯಭಾಗದಿಂದಲೂ ಬೆಳೆಯುವುದು. ಇವುಗಳ ಕಣ ಕಣಗಳಲ್ಲಿ ಕಣದ್ರವ್ಯದ ಜೋಡಣೆಯೇ ಕಣ್ಣಿಗೆ ಹೊಡೆಯುವಂತೆ ಎದ್ದು ಕಾಣುವ ಗುಣ. ಎರಡನೆಯದಾಗಿ ಯಾವುದೇ ವಿಧದ ಕಶಾಂಗೀ ಸಂತಾನೋತ್ಪಾದಕ ಕಣಗಳಿಲ್ಲದಿರುವುದು ಇದರಲ್ಲಿನ ಪ್ರಧಾನವಾಗಿ ಕಾಣುವ ಮತ್ತೊಂದು ಗುಣ. ವಿಷಮಯುಗ್ಮ ಗ್ಯಾಮಿಟುಗಳ ಮೂಲಕ ನಡೆಯುವ ಲಿಂಗರೀತಿಯ ಸಂತಾನೋತ್ಪಾದಕ ಕ್ರಿಯೆ ಈ ಕೆಂಪು ಶೈವಲಗಳಲ್ಲಿ ಬಲು ಸಾಮಾನ್ಯ. 

ವಾಸ, ಬೆಳೆವಣಿಗೆ : ಆಲ್ಗೆ ಜಲವಾಸಿ ಸಸ್ಯಗಳು, ಸಿಹಿನೀರು, ಉಪ್ಪುನೀರು ಯಾವುದೊ ಬಹಿಷ್ಕøತವಲ್ಲ. ಹಲವಾರು ಕಂದು ಮತ್ತು ಕೆಂಪು ಆಲ್ಗೆಗಳ ಬೆಳೆವಣಿಗೆ ಸಮುದ್ರಗಳಿಗೆ ಮಾತ್ರ ಸೀಮಿತ. ಕೆಲ್ಟ್ಸ್ ಎಂಬ ಸಮುದ್ರ ಸಸ್ಯಗಳು ಕಂದು ಆಲ್ಗೆ ವರ್ಣದವು. ಇವು ಪೆಸಿಫಿಕ್ ಮತ್ತು ಆಟ್ಲಾಂಟಿಕ್ ಸಾಗರಗಳಲ್ಲೊ ಮೆಡಿಟರೇನಿಯನ್ ಸಮುದ್ರ, ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರಗಳಲ್ಲಿಯೂ ವಿಶೇಷವಾಗಿ ಇವೆ. 

ಅಚ್ಚ ಹಸಿರು ಆಲ್ಗೆಗಳಲ್ಲಿ ಕೆಲವು ಸಮುದ್ರದಲ್ಲಿ ಬೆಳೆದರೂ ಮಿಕ್ಕವುಗಳ ವಿಕಾಸ ಸಿಹಿನೀರಿನಲ್ಲಿ, ಡೈಆಟಮ್ಸ್ ಎಂಬುವು ಸಿಹಿನೀರಿನಲ್ಲೂ ಸಮುದ್ರದಲ್ಲೂ ಬೆಳೆಯುವುವು. ನೀಲಿ ಹಸಿರು ಆಲ್ಗೆಗಳು ಸಿಹಿನೀರು ಮತ್ತು ಸಮುದ್ರದಲ್ಲಿಯೇ ಅಲ್ಲದೆ ಕೊಚ್ಚೆ, ಕೊಳಕು ಪ್ರದೇಶಗಳಲ್ಲಿಯೂ ಬೆಳೆಯಬಲ್ಲವು. ಕೆಲವು ಆಲ್ಗೆಗಳು ಇತರ ಆಲ್ಗೆಗಳ ಮೇಲೆ ಅಥವಾ ಇತರ ಸಸ್ಯಗಳ ಮೇಲೆ ಬೆಳೆಯುವ ಅಪ್ಪುಗಿಡಗಳು. ಸೆಫಲ್ಯೊರಸ್ ಎಂಬ ಆಲ್ಗೆ ಟೀ ಗಿಡಗಳ ಮೇಲೆ ಅರ್ಧ ಪರಾವಲಂಬಿಯಾಗಿ ಬೆಳೆಯುತ್ತದೆ. ಆಲ್ಗೆಯ ಒಂದು ಪ್ರಭೇದ ನೀರಿನಲ್ಲಿ ವಾಸ ಮಾಡುವ ಪ್ರಾಣಿಗಳ ದೇಹದೊಳಗೆ ಜೀವಿಸುತ್ತದೆ. ಕ್ಲೋರೆಲ್ಲ ಎಂಬುದು ಪ್ರೋಟೋಜೋವ ಹೈಡ್ರ, ಪೊರಿಫೆರ ಪ್ರಾಣಿಗಳಲ್ಲಿರುತ್ತದೆ. ಬ್ಯಾಸಿಕ್ಲಾಡಿಯ ಎಂಬುದು ಆಮೆಗಳಲ್ಲಿರುತ್ತದೆ. ಅನಬೀನಿಯೋಲಂ ಮತ್ತು ಸೈಮೊನಿಯೆಲ್ಲ ಎಂಬುವು ಮಾನವನ ಕರುಳಿನಲ್ಲಿ ವಾಸಿಸುತ್ತವೆ. ಅನಬೀನ, ನಾಸ್ಬಾಕ್ ಮುಂತಾದ ಆಲ್ಗೆಗಳು ಸೈಕ್ಯಾಸ್ ಆಂತೋಸಿ ರಾಸ್ ಮುಂತಾದ ಸಸ್ಯಗಳಲ್ಲಿ ವಾಸ ಮಾಡುತ್ತವೆ. ಇವುಗಳಿಗೆ ಅಂತರ್ಜೀವಿಸಸ್ಯಗಳು (ಎಂಡೋಫೈಟ್ಸ್) ಎಂದು ಹೆಸರು. 
ಸ್ಥಳೀಯ ಉಷ್ಣತೆಗೆ ಅನುಸಾರವಾಗಿ ಆಲ್ಗೆಯ ಬೆಳೆವಣಿಗೆಯಲ್ಲಿ ಮಾರ್ಪಾಡಾಗಿದೆ. ಅತಿಶೀತ ಪ್ರದೇಶದ ನೀರಿನಲ್ಲಿಯೂ (ಉಷ್ಣತೆ 100 ಸೆಂ.ಗ್ರೇ. ಗೂ ಕಡಿಮೆ) ಕೆಲವು ಆಲ್ಗೆಗಳು ಬೆಳೆಯುತ್ತವೆ. ಬಿಸಿನೀರಿನ ಬುಗ್ಗೆಗಳಲ್ಲಿ (ಉಷ್ಣತೆ 850 ಸೆಂ.ಗ್ರೇ.) ಸಹ ಕೆಲವು ಆಲ್ಗೆಗಳು ಇವೆ. ಸಮುದ್ರದ ಮೇಲ್ಭಾಗದಲ್ಲಿ ಕೆಲವು ಆಲ್ಗೆಗಳು ಬೆಳೆದರೆ ಕೆಲವು 100-300 ಆಳದವರೆಗೂ ಕಂಡುಬರುತ್ತವೆ. ಕೆಲವು ಕಂದು ಆಲ್ಗೆಗಳು ತಂಪು ವಾತಾವರಣವಿರುವ ನೀರಿನಲ್ಲಿ ಬೆಳೆಯುತ್ತವೆ. ಸಾರ್ಗಾಸ್ಸಂ ಎಂಬುದು ಉಷ್ಣಪ್ರದೇಶಗಳ ಸಮುದ್ರಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. 

ದೇಹರಚನೆ: ಆಲ್ಗೆ ಸಸ್ಯಗಳ ದೇಹರಚನೆ ವೈವಿಧ್ಯಪೂರ್ಣ, ಇವುಗಳ ಥಾಲಸ್ಸು (ವೈಶಿಷ್ಟ್ಯರಹಿತ ದೇಹ) ಅನೇಕ ವಿಧ. ಕೆಲವು ಆಲ್ಗೆಗಳಲ್ಲಿ ಥಾಲಸ್ಸು ಕೇವಲ ಒಂದೇ ಕಣದಿಂದ ಕೂಡಿದ್ದರೆ ಇನ್ನು ಕೆಲವಲ್ಲಿ ಅನೆಕ ಏಕಕಣಗಳು ಒಟ್ಟುಗೂಡಿ ಲೋಳೆಯಂಥ ವಸ್ತುವಿನಿಂದ ಆವೃತವಾಗಿರುತ್ತದೆ. ಇಂಥವು ಸಾಮೂಹಿಕ ಜೀವನವನ್ನು (ಕಲೋನಿಯಲ್ ಫಾರಮ್ಸ್) ನಡೆಸುತ್ತವೆ. ಕೆಲವು ಥಾಲಸ್ಸು ಎಳೆರೂಪದಲ್ಲಿರುವ (ಫಿಲಮೆಂಟ್) ಆಲ್ಗೆಗಳಿವೆ. ಈ ಎಳೆ ಸಾಮಾನ್ಯವಾಗಿ ಕವಲೊಡೆದಿರುವುದಿಲ್ಲ. ಆದರೆ ಕೆಲವು ಆಲ್ಗೆಗಳಲ್ಲಿ ಕವಲೊಡೆದಿರುವುದೂ ಇದೆ. ಅಡ್ಡವಾಗಿ ಹರಡುವ ಮತ್ತು ಲಂಬವಾಗಿ ಬೆಳೆಯುವ ಎಳೆಗಳು ಇರುವ ಆಲ್ಗೆಗಳಿವೆ. ಎಳೆಗಳು ನೀರಿನಲ್ಲಿ ಸ್ವತಂತ್ರವಾಗಿ ತೇಲುತ್ತಿರಬಹುದು ; ಅಥವಾ ಹೋಲ್ಡ್ ಫಾಸ್ಟ್ ಎಂಬ ಅಂಗದ ಸಹಾಯದಿಂದ ಆಧಾರಜಾಗವನ್ನು ಹಿಡಿದುಕೊಂಡಿರಬಹುದು. ಹೋಲ್ಡ್‍ಫಾಸ್ಟಿನಲ್ಲಿರುವ ಬೆರಳುಗಳಂಥ ಚಾಚುಭಾಗಗಳು ಆಧಾರ ಜಾಗವನ್ನು ಪಟ್ಟಾಗಿ ಹಿಡಿದುಕೊಳ್ಳಲು ಸಹಾಯಕ. ನೀರಿನಲ್ಲಿ ಬೆಳೆಯುವ ಇತರ ಗಿಡಗಳು, ದೊಡ್ಡ ಆಲ್ಗೆಗಳು, ಕಡ್ಡಿ, ಕಲ್ಲು, ಹವಳ, ಚಿಪ್ಪು, ತಳದ ನೆಲ ಮುಂತಾದವು ಆಲ್ಗೆಗೆ ಆಧಾರ ಸ್ಥಳ.
ಕೆಲವು ಕಂದು ಆಲ್ಗೆಗಳಲ್ಲಿಯೂ ಸೈಫೋನೇಲಿಸ್ ಶ್ರೇಣಿಗೆ ಸೇರಿದ ಕಾಲೆರ್ಬ ಮುಂತಾದ ಆಲ್ಗೆಗಳಲ್ಲೂ ಥಾಲಸ್ಸು ವಿಸ್ತಾರವಾಗಿ ಬೆಳೆಯುತ್ತದೆ. ಇವುಗಳಲ್ಲಿ ಕಾಂಡದಂಥ ಭಾಗಗಳೂ ಎಲೆಗಳಂಥ ಅಲಗು ಭಾಗಗಳು ಇವೆ. ಪೋಸ್ಟೆಲ್ಸಿಯ, ಐಸೇನಿಯ, ಮ್ಯಾಕ್ರೊಸಿಸ್ಟಿಸ್, ಲ್ಯಾಮಿನೇರಿಯ ಮುಂತಾದ ಆಲ್ಗೆಗಳಲ್ಲಿ ಥಾಲಸ್ಸು ಗಾತ್ರದಲ್ಲಿ ಬಹಳ ದೊಡ್ಡದು. ಇವುಗಳ ಉದ್ದ ಸುಮಾರು 100-200 ವರೆಗೆ.

ಆಲ್ಗೆ ಸಸ್ಯಗಳ ಕಣಗಳಿಗೆ ನಿರ್ದಿಷ್ಟ ರಚನೆ ಇದೆ. ಎಲ್ಲ ವಿಧದ ಆಲ್ಗೆಗಳಿಗೂ ಕಣಭಿತ್ತಿ ಇದೆ. ಸಾಮಾನ್ಯವಾಗಿ ಕಣಭಿತ್ತಿಯ ರಚನೆ ಸೆಲ್ಯೂಲೋಸ್‍ನಿಂದ ನೀಲಿ ಹಸಿರು ಆಲ್ಗೆಗಳಲ್ಲಿ ಕಣಭಿತ್ತಿಯ ಸುತ್ತಲೂ ಜೆಲಾಟೆನ್ ಎಂಬ ಲೋಳೆ ಆವರಿಸಿದೆ. ಡೈಆಟಮ್ಸ್ ಮತ್ತು ಡಸ್ಮಿಡ್‍ಗಳಲ್ಲಿ ಕಣ ಭಿತ್ತಿಯ ಶೃಂಗಾರ ಅನೇಕ ವಿಧಗಳಲ್ಲಿ ಇದೆ. ಈ ಕಾರಣದಿಂದ ಈ ಕಣಗಳು ಸೂಕ್ಷ್ಮ ದರ್ಶಕದಲ್ಲಿ ಬಲು ಮನೋಹರವಾಗಿ ಕಾಣುತ್ತವೆ. ಡೈಆಟಮ್‍ಗಳಲ್ಲಿ ಕಣಭಿತ್ತಿಯ ಮೇಲೆ ಸಿಲಿಕ ಪದಾರ್ಥ ಹರಡಿಕೊಂಡಿರುತ್ತದೆ. ಈ ಕಣಗಳು ಸತ್ತರೂ ಇದರ ಸಿಲಿಕದಿಂದ ಕೊಡಿದ ಭಿತ್ತಿ ಹಾಗೆಯೇ ಉಳಿದು ಡೈಆಟಮೇಸಿಯಸ್ ಮಣ್ಣು ಉತ್ಪತ್ತಿಯಾಗುತ್ತದೆ. ಆಲ್ಗೆ ಕಣಗಳಲ್ಲಿ ನಿರ್ದಿಷ್ಟ ಕಣಬೀಜವಿದೆ (ನ್ಯೊಕ್ಲಿಯಸ್), ನೀಲಿ ಹಸಿರು ಆಲ್ಗೆಗಳಲ್ಲಿ ಕಣಬೀಜ ನಿರ್ಣೀತ ರೀತಿಯಲ್ಲಿರುವುದಿಲ್ಲ. ಇವುಗಳ ಕಣದ ಮಧ್ಯಭಾಗದಲ್ಲಿ ಕೆಲವು ವರ್ಣ ಕಾಳುಗಳಿವೆ (ಕ್ರೋಮಾಟಿನ್ ಗ್ರಾನ್ಯೊಲ್ಸ್ ). ಇವೇ ಕಣಬೀಜಗಳು. ಆದ್ದರಿಂದ ಕಣಬೀಜವನ್ನು ಅನಿರ್ದಿಷ್ಟ ಕಣಬೀಜ (ಇನ್‍ಸಿಪಿಯೆಂಟ್ ನ್ಯೂಕ್ಲಿಯಸ್)ಎಂದು ಕರೆಯುತ್ತಾರೆ. ಉಳಿದ ಎಲ್ಲ ಆಲ್ಗೆಗಳಲ್ಲೂ ಕಣಬೀಜ ಗರಿಷ್ಠವರ್ಗದ ಸಸ್ಯಗಳ ಕಣಬೀಜದಂತೆ ನಿರ್ದಿಷ್ಟವಾಗಿದೆ. ಕೆಲವು ಆಲ್ಗೆಗಳಲ್ಲಿ ಒಂದು ಕಣದಲ್ಲಿ ಒಂದಕ್ಕಿಂತ ಹೆಚ್ಚು ಕಣಬೀಜಗಳಿರಬಹುದು. ಕೆಲವು ಆಲ್ಗೆಗಳಲ್ಲಿ ಎಳೆಗಳ ಕಣಗಳು ಮಧ್ಯದಲ್ಲಿ ಅಡ್ಡ ಗೋಡೆಗಳಿಲ್ಲದೆ ಒಂದೇ ನಾಳದಂತಿರುತ್ತವೆ. ಇವುಗಳಲ್ಲಿ ಅನೇಕ ಕಣಬೀಜಗಳಿವೆ. 

ಕಣಗಳಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಅವಕಾಶಗಳು (ಕುಹರಗಳು) ಇವೆ. ಅವು ಸಣ್ಣವಾಗಿದ್ದು ಹೆಚ್ಚು ಸಂಖ್ಯೆಯಲ್ಲಿರಬಹುದು. ನೀಲಿ ಹಸಿರು ಆಲ್ಗೆಗಳಲ್ಲಿ ಸಾಮಾನ್ಯವಾಗಿ ಅವಕಾಶಗಳಿರುವುದಿಲ್ಲ. ಬಹುಕಣಬೀಜಗಳಿರುವ ಕಣಗಳ ಮಧ್ಯಭಾಗದಲ್ಲಿ ನೀಳವಾದ ಅವಕಾಶವಿದೆ. 

ವರ್ಣಗ್ರಾಹಿಗಳು (ಕ್ರೋಮೊಸೋಮ್ಸ್) : ಇವು ಬಲು ಮುಖ್ಯ ಭಾಗಗಳು. ವರ್ಣಗ್ರಾಹಿಗಳಲ್ಲಿ ನವವಿಧ ವರ್ಣಗಳು ಆಲ್ಗೆ ಸಸ್ಯಗಳ ವರ್ಗೀಕರಣಕ್ಕೆ ಅನುಕೂಲವಾಗುತ್ತವೆ. ವಿವಿಧವರ್ಣಗಳು ಸಾಮಾನ್ಯವಾಗಿ ವರ್ಣಗ್ರಾಹಿಗಳಲ್ಲಿ ಅಡಕವಾಗಿದ್ದರೂ ನೀಲಿ ಹಸಿರು ಆಲ್ಗೆಗಳಲ್ಲಿ ನಿರ್ದಿಷ್ಟವರ್ಣಗ್ರಾಹಿಗಳಿರುವುದಿಲ್ಲ. ಈ ಸಸ್ಯಗಳಲ್ಲಿ ವರ್ಣಪದಾರ್ಥಗಳು ಜೀವಸರದಲ್ಲಿಯೇ ಅಡಕವಾಗಿವೆ. ಇತರ ಆಲ್ಗೆ ಸಸ್ಯಗಳಲ್ಲಿ ವರ್ಣಪದಾರ್ಥಗಳು ನಿರ್ದಿಷ್ಟ ವರ್ಣಗ್ರಾಹಿಗಳಲ್ಲಿವೆ. ವರ್ಣಗ್ರಾಹಿಗಳ ಸಂಖ್ಯೆ ಗಾತ್ರ ರೂಪ ಮತ್ತು ಆಕಾರ ನಿರ್ದಿಷ್ಟವಾಗಿದೆ. ವರ್ಣಗ್ರಾಹಿಗಳು ಬಟ್ಟಲಿನಾಕಾರವಾಗಿಯೂ ತಟ್ಟೆಯಾಕಾರವಾಗಿಯೂ ನಕ್ಷತ್ರದಾಕಾರವಾಗಿಯೂ ಪಟ್ಟಿಯಾಕಾರವಾಗಿಯೂ ಬಲೆಯಾಕಾರವಾಗಿಯೂ ಇವೆ. ಇವುಗಳ ಸಂಖ್ಯೆ ಒಂದ ಕಣದಲ್ಲಿ ಒಂದು ಅಥವಾ ಅಧಿಕ. ವರ್ಣಗ್ರಾಹಿಗಳಲ್ಲಿನ ಪ್ರಧಾನವರ್ಣಗಳ ವಿವರಗಳನ್ನು ಕೆಳಗೆ ತೋರಿಸಿದೆ. 

ನೀಲಿ ಹಸಿರು ಆಲ್ಗೆ : ಕ್ಲೋರೊಫಿಲ್ a, β ಕ್ಯಾರೊಟಿನ್. ಫೈಕೊಸೈಯನಿಸ್ ಮತ್ತು ಅಲ್ಪ ಸ್ವಲ್ಪ ಮಿಕ್ಸೊeóÁಂತೋಫಿಲ್.
ಅಚ್ಚಹಸಿರು ಆಲ್ಗೆ : ಕ್ಲೋರೊಫಿಲ್ a,  ಕ್ಲೋರೊಫಿಲ್ b, β ಕ್ಯಾರೊಟಿನ್, ಲ್ಯೊಟಿನ್.
ಕಂದು ಆಲ್ಗೆ : ಕ್ಲೋರೊಫಿಲ್ ಚಿ, β ಕ್ಯಾರೊಟಿನ್, ಪ್ಯೂಕೋಸಾಂತಿನ್ ಮತ್ತು ಅಲ್ಪಸ್ವಲ್ಪ ಕ್ಲೋರೊಫಿಲ್ ಛಿ ಪ್ಲೇವೋ¸óÁಂತಿನ್, ನಿಯೋ¸óÁಂತಿನ್ ಮುಂತಾದುವು.

ಸುವರ್ಣಹಸಿರು ಆಲ್ಗೆ : ಕ್ಲೋರೊಫಿಲ್ ಚಿ, β ಕ್ಯಾರೊಟಿನ್, ಪ್ಯೂಕೋ¸óÁಂತಿನ್ ಮತ್ತು ಅಲ್ಪಸ್ವಲ್ಪ ಕ್ಲೋರೊಫಿಲ್ ಛಿ, ನಿಯೋಪ್ಯೂಕೋ¸óÁಂತಿನ್, ಡಯಾಟೋ¸óÁಂತಿನ್, ಡಯಾಟಿನೋ¸óÁಂತಿನ್ ಮುಂತಾದುವು.
ಹಳದಿ ಹಸಿರು ಆಲ್ಗೆ : ಕ್ಲೋರೊಫಿಲ್ ಚಿ, β ಕ್ಯಾರೊಟಿನ್ ಅನಿರ್ಣಯವಾದ ¸óÁಂತೋಫಿಲ್ ಮತ್ತು ಅಲ್ಪಸ್ವಲ್ಪ ಕ್ಲೋರೊಫಿಲ್ (ಇ).

ಕೆಂಪು ಆಲ್ಗೆ : ಕ್ಲೋರೊಫಿಲ್ ಚಿ, β ಕ್ಯಾರೊಟಿನ್, ಫೈಕೊಎರಿತ್ತಿನ್ ಮತ್ತು ಅಲ್ಪಸ್ವಲ್ಪ ಫೈಕೊಸೈಯನಿಸ್, ಲೊಟಿನ್, ಕ್ಯಾರೊಟಿನ್ ಮತ್ತು ಕ್ಲೋರೊಫಿಲ್ ಜ.

ಡೈನೋಫ್ಲಾಜಿಲ್ಲಾಟ : ಕ್ಲೋರೊಫಿಲ್ ಚಿ, β ಕ್ಯಾರೊಟಿನ್, ಅಲ್ಪಸ್ವಲ್ಪ ಕ್ಲೋರೊಫಿಲ್ b, ಪೆರಿಡಿನಿನ್ ಮುಂತಾದುವು.
ಯೂಗ್ಲಿನೋಫೈಟ್ : ಕ್ಲೋರೊಫಿಲ್ ಚಿ, β ಕ್ಯಾರೊಟಿನ್, ಅಲ್ಪಸ್ವಲ್ಪ ಕ್ಲೋರೊಫಿಲ್ b, ಪೆರಿಡಿನಿನ್ ಮುಂತಾದುವು.
ವರ್ಣಗ್ರಾಹಿಗಳಲ್ಲಿ ಪೈರಿನಾಯ್ಡ್ ಎಂಬ ನಿರ್ದಿಷ್ಟಸಂಖ್ಯೆಯ ಆಹಾರ ಶೇಖರಣ ಭಾಗಗಳಿವೆ. ಇವು ವರ್ಣಗ್ರಾಹಿಯ ಮೇಲೆ ನಿರ್ದಿಷ್ಟಸ್ಥಳಗಳಲ್ಲಿವೆ. ಪೈರಿನಾಯಿಡ್‍ಗಳಲ್ಲಿ ಮಾಂಸಗಳಿಂದ ಕೂಡಿದ ಒಂದು ಕೇಂದ್ರವಿದ್ದು ಅದರ ಸುತ್ತಲೂ ಪಿಷ್ಟದ ಕವಚಗಳಿವೆ. ಪೈರಿನಾಯಿಡ್‍ಗಳ ಜೊತೆಗೆ ಅಲ್ಗೆಗಳ ಕಣಗಳಲ್ಲಿ ಕೆಲವು ವಿಧವಾದ ಆಹಾರ ವಸ್ತುಗಳು ಶೇಖರವಾಗುತ್ತವೆ. ಎಣ್ಣೆ ಪದಾರ್ಥಗಳು, ಸಾಮಾನ್ಯ ಪಿಷ್ಟಪದಾರ್ಥಗಳ ಜೊತೆಗೆ ಲ್ಯೊಕೊಸಿನ್ ಎಂಬ ಪ್ರತ್ಯೇಕ ಆಹಾರ ಪದಾರ್ಥ ಹಳದಿ ಹಸಿರು ಆಲ್ಗೆಗಳಲ್ಲೂ ಲ್ಯಾಮಿನೇರಿನ್ ಎಂಬುದು ಕಂದು ಆಲ್ಗೆಗಳಲ್ಲೂ ಸೈಯಾನೋಫೈಸಿಯನ್‍ಪಿಷ್ಟ ಎಂಬುದು ನೀಲ ಹಸಿರು ಆಲ್ಗೆಗಳಲ್ಲೂ ಫ್ಲಾರಿಡಿಯನ್ ಪಿಷ್ಟ ಕೆಂಪು ಆಲ್ಗೆಗಳಲ್ಲೂ ಶೇಖರವಾಗಿರುವುದು. ಇವುಗಳ ಜೊತೆಗೆ ಮಾನ್ನಿಟಾಲ್ ಎಂಬ ಮದ್ಯಸಾರವೂ ಕಂದು ಆಲ್ಗೆಗಳಲ್ಲಿ ಶೇಖರವಾಗಿರುತ್ತದೆ. ಕೆಲವು ಆಲ್ಗೆಗಳಲ್ಲಿ ಪ್ರತ್ಯೇಕ ಚಲನಾಂಗಗಳಿವೆ. ಇವುಗಳಿಗೆ ಶಿಲಕೆಗಳೆಂದು (ಸಿಲಿಯ) ಹೆಸರು. ಒಂದು ಕಣದಲ್ಲಿ ಸಾಮಾನ್ಯವಾಗಿ ಎರಡು ಶಿಲಕಗಳಿವೆ. ಡೈನೋಪ್ಲಾಜಿಲೇಟ, ಯೂಗ್ಲಿನೋಫೈಟದ ಎಲ್ಲ ಸಸ್ಯಗಳಲ್ಲೊ ಅಚ್ಚ ಹಸಿರು ಆಲ್ಗೆಯ ಕ್ಲಾಮಿಡೋಮೊನಾಸ್, ವಾಲ್ವಾಕ್ಸ್ ಮುಂತಾದುವುಗಳಲ್ಲೂ ಶಿಲಕೆಗಳಿವೆ. ಈ ಆಲ್ಗೆಗಳಿಗೆ ನೀರಿನಲ್ಲಿ ಈಜಲು ಇವು ಸಹಾಯಕಗಳು. 

ಸಂತಾನಾಭಿವೃದ್ದಿ : ಆಲ್ಗೆ ಸಸ್ಯಗಳಲ್ಲಿ ಮೂರು ವಿಧಗಳಲ್ಲಿ ಸಂತಾನಾಭಿವೃದ್ದಿಯಾಗುತ್ತದೆ. 1. ಶಾಖಾಛೇದ ಸಂತಾನಾಭಿವೃದ್ದಿ (ವೆಜಿಟೆಟಿವ್ ರಿಪ್ರೊಡಕ್ಷನ್). 2. ನಿರ್ಲಿಂಗ ಸಂತಾನಾಭಿವೃದ್ದಿ (ಅಸೆಕ್ಯುಯಲ್ ರಿಪ್ರೊಡಕ್ಷನ್). 3. ಲೈಂಗಿಕ ಸಂತಾನಾಭಿವೃದ್ದಿ (ಸೆಕ್ಯುಯಲ್ ರಿಪ್ರೊಡಕ್ಷನ್).
ಆಲ್ಗೆಗಳಲ್ಲಿ ಶಾಖಾಛೇದನಕ್ರಮ ಸರ್ವಸಾಮಾನ್ಯವಾದ ಸಂತಾನಾಭಿವೃದ್ದಿ ಕ್ರಮ. ಆಲ್ಗೆಗಳ ಥಾಲಸ್ಸು ಅನೇಕ ಕಾರಣಗಳಿಂದ ಛೇದವಾಗಿ ಪ್ರತಿ ಭಾಗವೂ ಒಂದೊಂದು ಹೊಸ ಸಸ್ಯವಾಗಿ ಬೆಳೆಯುವ ಶಕ್ತಿ ಪಡೆದಿದೆ. ಮೀನು ಮುಂತಾದ ಕೆಲವು ಜಲಚರಗಳು ಆಲ್ಗೆಗಳನ್ನು ಆಹಾರವಾಗಿ ಉಪಯೋಗಿಸುತ್ತವೆ. ಇವು ಥಾಲಸ್ಸನ್ನು ಕಡಿದು ತುಂಡುಮಾಡಬಹುದು. ಸಮುದ್ರಗಳಲ್ಲಿ ಅಲೆಗಳ ರಭಸದಿಂದಲೂ ಜಲಚರಗಳ ಓಡಾಟಗಳಿಂದಲೂ ಪ್ರವಾಹಗಳಿಂದಲೂ ನದಿಗಳಲ್ಲಿ ನೀರಿನ ವೇಗದಿಂದಲೊ ಥಾಲಸ್ಸು ತುಂಡಾಗುವ ಸಂಭವವಿದೆ. ನೀಲಿ ಹಸಿರು ಆಲ್ಗೆಗಳಲ್ಲಿ ಕಣಗಳು ದ್ವಿಗುಣಛೇದವಾಗುತ್ತವೆ (ಭೈನರಿ ಫಿಶ್ಯನ್). ಅಂದರೆ ಪ್ರತಿಕಣ ಇಬ್ಬಾಗವಾಗಿ ಆ ಭಾಗ ಮತ್ತೆ ಇಬ್ಭಾಗವಾಗುತ್ತದೆ. ಇದು ಒಂದು ಸಾಮಾನ್ಯ ಶಾಖಾಪ್ರಜನನ ವಿಭಾಗ. ಈ ಆಲ್ಗೆಗಳ ಎಳೆಗಳಲ್ಲಿ ಮಧ್ಯೆ ಮಧ್ಯೆ ಸತ್ತ ಕಣಗಳು ಸೇರಿರುತ್ತವೆ. ಇಂಥ ಭಾಗಗಳಲ್ಲಿ ಕಣಗಳು ಬೇರ್ಪಟ್ಟು ತುಂಡಾದ ಭಾಗ ಪೂರ್ಣ ಎಳೆಗಳಾಗಿ ಬೆಳೆಯುತ್ತವೆ. ಕಂದು ಆಲ್ಗೆಗಳಲ್ಲಿ ಕೆಂಪು ಥಾಲಸ್ಸುಗಳು ಪೂರ್ಣವಾಗಿ ಛೇದವಾಗುವುದಿಲ್ಲ. ಅಪೂರ್ಣಛೇದಭಾಗಗಳು ಬೆಳೆವಣಿಗೆಯನ್ನು ಮುಂದುವರಿಸುತ್ತವೆ. ಸ್ಪಾಸಿಲೇರಿಯ ಮುಂತಾದ ಆಲ್ಗೆಗಳಲ್ಲಿ ಪ್ರಾಪಗ್ಯೂಲ್ಸ್ ಎಂಬ ಪ್ರತ್ಯೇಕ ಶಾಖಾಪ್ರಜನನ ಭಾಗಗಳು ಉತ್ಪತ್ತಿಯಾಗುತ್ತವೆ. ಇವು ಪ್ರತ್ಯೇಕಗೊಂಡು ಹೊಸ ಸಸ್ಯಗಳಾಗಿ ಬೆಳೆಯುತ್ತವೆ.
ನಿರ್ಲಿಂಗ ಸಂತಾನಾಭಿವೃದ್ಧಿ ಸಹ ಎಲ್ಲ ವಿಧವಾದ ಆಲ್ಗೆಗಳನ್ನೂ ಕಂಡು ಬರುತ್ತದೆ. ನೀಲಿ ಹಸಿರು ಆಲ್ಗೆಗಳಲ್ಲಂತೂ ಇದೇ ಪ್ರಧಾನವಾದ ಕ್ರಮ. ನಿರ್ಲಿಂಗ ಸಂತಾನಾಭಿವೃದ್ಧಿಗಾಗಿ ಪ್ರತ್ಯೇಕ ಕಣಗಳು ಉತ್ಪತ್ತಿಯಾಗುತ್ತವೆ. ಇವುಗಳ ಉತ್ಪತ್ತಿ ಕನಿಷ್ಟವರ್ಗದ ಆಲ್ಗೆಗಳ ಥಾಲಸ್ಸಿನ ಎಲ್ಲ ಕಣಗಳಲ್ಲೂ ಇದೆ. ಕೆಲವು ಆಲ್ಗೆಗಳಲ್ಲಿ ಥಾಲಸ್ಸಿನ ಕೆಲವು ಕಣಗಳು ಪ್ರತ್ಯೇಕ ಕೋಶಗಳಲ್ಲೂ ಉತ್ಪತ್ತಿಯಾಗುವುದುಂಟು. eóÉೂವೊಸ್ಪೋರ್ಸ್, ಏಪ್ಲನೋಸ್ಪೋರ್ಸ್, ಹಿಪ್ಲೋಸ್ಪೋರ್ಸ್, ಅಕಿನೆಟ್ಸ್, ಹೆಟಿರೊಸಿಸ್ಟ್, ಮನೋಸ್ಟೋರ್, ಟೆಟ್ರಸ್ಟೋರ್ ಮುಂತಾದುವು ನಿರ್ಲಿಂಗ ಕಣಗಳು. eóÉೂವೊಸ್ಪೋರುಗಳು ಚಲನೆಯುಳ್ಳ ನಿರ್ಲಿಂಗಕಣಗಳು. ಇವು ವಿವಿಧಾಕೃತಿಗಳಿವೆ. ಇವುಗಳ ಚಲನೆಗೆ ಸಹಾಯಮಾಡಲು ಶಿಲಕೆಗಳು ಮುಂಭಾಗದಲ್ಲಿವೆ. ಇವುಗಳ ಸಂಖ್ಯೆ ಒಂದೊಂದು ವಿಧವಾದ ಆಲ್ಗೆಯಲ್ಲಿ ಒಂದೊಂದು ವಿಧ. ಕೆಲವು ಆಲ್ಗೆಗಳ eóÉೂವೊಸ್ಟೋರುಗಳಲ್ಲಿ ಎರಡು ಶಿಲಕೆಗಳಿವೆ. ಕೆಲವಲ್ಲಿ ನಾಲ್ಕು ಶಿಲಕೆಗಳಿವೆ. ಯೂಡೊಗೋನಿಯಂ, ವಾಚೀರಿಯ ಮುಂತಾದ ಆಲ್ಗೆಗಳ eóÉೂವೊಸ್ಪೋರುಗಳಲ್ಲಿ ಅನೇಕ ಶಿಲಕೆಗಳಿವೆ. ಯೂಡೊಗೋನಿಯಂನಲ್ಲಿ ಶಿಲಕೆಗಳು ಒಂದು ಸುತ್ತಿನಲ್ಲಿ ಜೋಡಿಸಿದೆ. ವಾಚೀರಿಯದಲ್ಲಿ ಮೈಮೇಲೆಲ್ಲ ಜೋಡಿಸಿವೆ. ಶಿಲಕೆಗಳೆರಡೂ ಒಂದೇ ಸಮವಾಗಿರಬಹುದು. ಹಳದಿ ಹಸಿರು ಆಲ್ಗೆಗಳ eóÉೂವೊಸ್ಪೋರುಗಳಲ್ಲಿ ಶಿಲಕೆಗಳು ಅಸಮ. ಶಿಲಕೆಗಳು ಸದಾ ಬಡಿದುಕೊಳ್ಳುತ್ತಿರುವುದರಿಂದ eóÉೂವೊಸ್ಪೋರು ಮುಂದು ಹಿಂದು ಈಜುವುದಕ್ಕೆ ಸಹಾಯವಾಗುತ್ತದೆ. eóÉೂವೊಸ್ಪೋರುಗಳಲ್ಲಿ ಏಕಕಣಬೀಜವಿದೆ. ಅವು ಉತ್ಪತ್ತಿಯಾದ ಕಣವನ್ನು ಛೇದಿಸಿಕೊಂಡು ಹೊರಬರುತ್ತವೆ. ಕೆಲವು ಆಲ್ಗೆಗಳಲ್ಲಿ ಇವುಗಳ ಬಿಡುಗಡೆಗೆ ಪ್ರತ್ಯೇಕ ದ್ವಾರಗಳಿವೆ. ಇವುಗಳಲ್ಲಿ ಕಣಭಿತ್ತಿ ಇರುವುದಿಲ್ಲ. ಹೊರಬಂದ eóÉೂವೊಸ್ಪೋರುಗಳು ಈಜಾಡುತ್ತಿದ್ದು ಆಧಾರ ಸ್ಥಳ ಸಿಕ್ಕಿದಾಗ ಅದಕ್ಕೆ ಅಂಟಿಕೊಂಡು ಚಲನಾಂಗವನ್ನು ಕಳೆದುಕೊಳ್ಳುತ್ತವೆ. ಆ ಮೇಲೆ ಇವು ಬೆಳೆದು ಪ್ರತ್ಯೇಕ ಸಸ್ಯಗಳಾಗುತ್ತವೆ. ಕೆಂಪು ಆಲ್ಗೆ, ನೀಲಿ ಹಸಿರು ಆಲ್ಗೆಗಳಲ್ಲಿ ಜೊವೊಸ್ಪೋರುಗಳು ಉತ್ಪತ್ತಿಯಾಗುವುದಿಲ್ಲ. ಕೆಲವು ಆಲ್ಗೆಗಳಲ್ಲಿ ಶಿಲಕೆಗಳಿಲ್ಲದ ಸ್ಪೋರುಗಳು ಉತ್ಪತ್ತಿಯಾಗುತ್ತವೆ. ಈ ಸ್ಪೋರುಗಳ ಸುತ್ತಲೂ ಕಣಭಿತ್ತಿ ಇಲ್ಲದೆ ನಗ್ನವಾಗಿದ್ದರೆ ಇಂಥವುಗಳನ್ನು ಏಷ್ಲಾನೋ ಸ್ಪೋರುಗಳೆಂದು ಕರೆಯುತ್ತಾರೆ. ಶಿಲಕೆಗಳಿಲ್ಲದ ಸ್ಪೋರುಗಳು ಕೆಲವು ಮಂದವಾದ ಭಿತ್ತಿಯಿಂದ ಕೊಡಿವೆ. ಇವುಗಳ ಹೆಸರು ಹಿಪ್ನೊಸ್ಪೋರು. ಕೆಲವು ಅಚ್ಚ ಹಸಿರು ಆಲ್ಗೆ ಮತ್ತು ಹಳದಿ ಹಸಿರು ಆಲ್ಗೆಗಳಲ್ಲಿ ಇಂಥ ಸ್ಪೋರುಗಳು ಉತ್ಪತ್ತಿಯಾಗುತ್ತವೆ. ಇವು ಬೆಳೆದು ಹೊಸಸಸ್ಯಗಳನ್ನು ಉತ್ಪತ್ತಿಮಾಡುತ್ತವೆ. ಕೆಲವು ಆಲ್ಗೆಗಳಲ್ಲಿ ಒಂದು ಶಾಖಾಕಣ (ವೆಜಿಟೆಟಿವ್ ಸೆಲ್) ಪೂರ್ಣವಾಗಿ ಮಾರ್ಪಟ್ಟು ಒಂದು ವಿಧವಾದ ನಿರ್ಲಿಂಗ ಸ್ಪೋರುಗಳಾಗುತ್ತವೆ. ಇವುಗಳ ಹೆಸರು ಅಕಿನೇಟ್, ಕ್ಲಡೊಪೂರ, ಪಿತಾಫೊರ ಮುಂತಾದ ಆಲ್ಗೆಗಳಲ್ಲಿ ಇವು ಕ್ರಮವಾಗಿ ಉತ್ಪತ್ತಿಯಾದರೆ ಕೆಲವು ಆಲ್ಗೆಗಳಲ್ಲಿ ಉತ್ಪತ್ತಿಯಾಗುವುದಿಲ್ಲ. ನೀಲಿ ಹಸಿರು ಆಲ್ಗೆಗಳಲ್ಲಿ ಶಿಲಕೆಗಳಿಲ್ಲದ ಹೆಟಿರೊಸಿಸ್ಟ್ ಎಂಬ ಪ್ರತ್ಯೇಕ ಸ್ಪೋರು ಉತ್ಪತ್ತಿಯಾಗುತ್ತದೆ. ಇದೊ ಮಾರ್ಪಾಟಾದ ಒಂದು ಶಾಖಾಕಣ. ಇವು ಎಲೆಗಳ ಅಂತ್ಯದಲ್ಲಾಗಲಿ ಮಧ್ಯದಲ್ಲಾಗಲಿ ಇರುತ್ತವೆ. ಎಳೆಗಳು ಇವುಗಳ ಬಳಿ ಛಿದ್ರವಾಗಿ ಬೇರ್ಪಟ್ಟು ಶಾಖಾಪ್ರಜನನವಾಗುತ್ತವೆ. ಈ ಆಲ್ಗೆಗಳಲ್ಲಿ ಅಕಿನೇಟ್, ಎಂಡೋಸ್ಪೋರ್ ಮುಂತಾದುವು ಸಹ ಉತ್ಪತ್ತಿಯಾಗುತ್ತವೆ. ಕಂಪು ಆಲ್ಗೆಗಳಲ್ಲಿ ಮಾನೋಸ್ಪೋರ್, ಬೈಸ್ಪೋರ್, ಟ್ರೆಸ್ಪೋರ್, ಪಾಲಿಸ್ಪೋರ್ ಎಂಬ ಸ್ಪೋರುಗಳು ಉತ್ಪತ್ತಿಯಾಗಿ ನಿರ್ಲಿಂಗ ಸಂತಾನಾಭಿವೃದ್ದಿಗೆ ಸಹಾಯವಾಗುತ್ತವೆ. 

ಲೈಂಗಿಕ ಸಂತಾನಾಭಿವೃದ್ಧಿ ನೀಲಿ ಹಸಿರು ಆಲ್ಗೆಗಳನ್ನು ಬಿಟ್ಟು ಮಿಕ್ಕೆಲ್ಲ ಆಲ್ಗೆ ಸಸ್ಯಗಳಲ್ಲಿ ಕಂಡುಬಂದಿದೆ. ಲೈಂಗಿಕ ಸಂತಾನಾಭಿವೃದ್ದಿಯಲ್ಲಿ ಲೈಂಗಿಕ ಕಣಗಳು (ಸೆಕ್ಯುಯಲ್ ಸೆಲ್ಸ್) ಉತ್ಪತ್ತಿಯಾಗುತ್ತವೆ. ಇವುಗಳ ಹೆಸರು ಗ್ಯಾಮೀಟುಗಳು. ಗ್ಯಾಮೀಟುಗಳ ಉತ್ಪತ್ತಿ ನಿರ್ದಿಷ್ಟವಾದ ಕೋಶಗಳಲ್ಲಿ; ಈ ಕೋಶಗಳಿಗೆ ಗ್ಯಾಮಿಟಾಂಜಿಯ ಎಂದು ಹೆಸರು. ಕೆಲವು ಏಕಕಣ ಆಲ್ಗೆಗಳಲ್ಲೂ ಸರಳರೂಪದ ಎಳೆಗಳಲ್ಲೂ ಶಾಖಾಕಣಗಳೇ ಗ್ಯಾಮೀಟುಗಳನ್ನು ಉತ್ಪತ್ತಿಸುತ್ತವೆ. ಥಾಲಸ್ಸಿನ ಸಂಕೀರ್ಣತೆ ಹೆಚ್ಚಿದಂತೆಲ್ಲ ಲಿಂಗಕೋಶಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಅನೇಕ ಆಲ್ಗೆ ಸಸ್ಯಗಳಲ್ಲಿನ ಗ್ಯಾಮೀಟುಗಳಿಗೆ ಚಲನೆಯಿದೆ. ಕೆಲವು ಆಲ್ಗೆಗಳಲ್ಲಿ ಕೇವಲ ಗಂಡು ಗ್ಯಾಮೀಟುಗಳು ಚಲಿಸುತ್ತವೆ ಹೆಣ್ಣು ಗ್ಯಾಮೀಟುಗಳು ಚಲಿಸುವುದಿಲ್ಲ. ಇಂಥ ಹೆಣ್ಣು ಗ್ಯಾಮೀಟುಗಳಿಗೆ ಸಾಧಾರಣವಾಗಿ ಅಂಡಗಳೆಂದು (ಎಗ್ ಆರ್ ಓವಮ್) ಹೆಸರು. ಇವು ಉತ್ಪತ್ತಿಯಾಗುವ ಕೋಶಕ್ಕೆ ಊಗೋನಿಯ ಎಂದು ಹೆಸರು. ಕೆಲವು ಆಲ್ಗೆಗಳಲ್ಲಿ ಗಂಡು ಮತ್ತು ಹೆಣ್ಣು ಗ್ಯಾಮೀಟುಗಳು ಒಂದನ್ನೊಂದು ಎಲ್ಲ ವಿಧಗಳಲ್ಲಿಯೂ ಹೋಲುತ್ತವೆ. ಇವುಗಳ ರೂಪ ಗಾತ್ರ ಮತ್ತು ಚಲನೆ ಒಂದೇ ವಿಧ. ಇವುಗಳಲ್ಲಿ ಯಾವುದು ಗಂಡುಕಣ, ಯಾವುದು ಹೆಣ್ಣು ಕಣವೆಂದು ಗುರುತಿಸುವುದು ಕಷ್ಟ. ಇಂಥ ಕಣಗಳಿಗೆ ಸಮಲಿಂಗಕಣವೆಂದು (ಐಸೊಗ್ಯಾಮೀಟ್ಸ್) ಹೆಸರು. ಇವುಗಳ ಸಂಯೋಗಕ್ಕೆ ಸಮಲಿಂಗಕಣ ಸಂಯೋಗ (ಐಸೊಗ್ಯಾಮಿ) ಎಂದು ಹೆಸರು. ಕೆಲವು ಆಲ್ಗೆಗಳಲ್ಲಿ ಗ್ಯಾಮೀಟುಗಳೆರಡು ಚಲಿಸುವ ಶಕ್ತಿಯನ್ನು ಹೊಂದಿದ್ದರೂ ರೂಪ ಮತ್ತು ಗಾತ್ರಗಳಲ್ಲಿ ಅಸಮವಾಗಿರುತ್ತವೆ.  ಇವುಗಳ ಚಲನೆಯಲ್ಲೂ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ. ಇಂಥ ಲಿಂಗಕಣಗಳಿಗೆ ಅಸಮಲಿಂಗಕಣಗಳೆಂದು (ಆನ್ ಐಸೊಗ್ಯಾಮೀಟ್) ಹೆಸರು. ಇವುಗಳ ಸಂಯೋಗಕ್ಕೆ ಅಸಮಲಿಂಗಕಣ ಸಂಯೋಗ(ಆನ್ ಐಸೊಗ್ಯಾಮಿ) ಎಂದು ಹೆಸರು. ಅನೇಕ ಆಲ್ಗೆಗಳಲ್ಲಿ ಗಂಡುಕಣ ಗಾತ್ರದಲ್ಲಿ ಚಿಕ್ಕದಾಗಿದ್ದು ಚಲನಶಕ್ತಿ ಹೊಂದಿದೆ. ಹೆಣ್ಣುಕಣ ಗಾತ್ರದಲ್ಲಿ ದೊಡ್ಡದಾಗಿದ್ದು ಚಲನಾಂಗರಹಿತವಾಗಿರುತ್ತದೆ. ಸಾಮಾನ್ಯವಾಗಿ ಗಂಡುಕಣಗಳು ಒಂದು ಕೋಶದಲ್ಲಿ ಅನಿರ್ದಿಷ್ಟ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ ; ಆದರೆ ಹೆಣ್ಣುಕಣಗಳು ನಿರ್ದಿಷ್ಟ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ. ಇಂಥ ಹೆಣ್ಣು ಕಣಗಳಿಗೆ ಅಂತರೋಜûುಆಯ್ಡ್‍ಗಳೆಂದು ಹೆಸರು. ಸ್ತ್ರೀಲಿಂಗ ಕಣಕ್ಕೆ ಅಂಡ ಅಥವಾ ಓವಮ್ ಎಂದು ಹೆಸರು. ಅಂತರೋಜûುಆಯ್ಡ್‍ಗಳು ನೀರಿಗೆ ಬಿಡುಗಡೆಯಾಗುತ್ತವೆ. ಆದರೆ ಅಂಡಗಳು ಹೊರಗೆ ಬಿಡುಗಡೆಯಾಗದೆ ಅಂಡಕೋಶದಲ್ಲಿಯೇ ಇದ್ದು ಸಂಯೋಗವಾಗುತ್ತವೆ. ಇಂಥ ಗ್ಯಾಮೀಟುಗಳಿಗೆ ಊಗ್ಯಾಮೀಟ್ಸ್ ಎಂದು ಹೆಸರು. ಈ ಸಂಯೋಗಕ್ಕೆ ಊಗ್ಯಾಮಿ ಎಂದು ಹೆಸರು. ಕಾಂಜುಗೆಲಿಸ್ ಶ್ರೇಣಿಗೆ ಸೇರಿದ ಆಲ್ಗೆಗಳಲ್ಲಿ ಲಿಂಗಕಣ ವಿಭೇದವಿರುವುದಿಲ್ಲ. ಎರಡು ಕಣಗಳು ಅಥವಾ ಎರಡು ಎಳೆಗಳು ಒಂದನ್ನೊಂದು ಸಂಧಿಸಿದಾಗ ಎರಡರ ಮಧ್ಯೆ ಒಂದ ನಾಳ ಏರ್ಪಡುತ್ತದೆ. ಇದರ ಮೂಲಕ ಕಣದ್ರವ ಒಂದ ಕಣದಿಂದ ಮತ್ತೊಂದು ಕಣಕ್ಕಾಗಲಿ ಎರಡು ಕಣಗಳಿಂದಲೂ ಮಧ್ಯದ ನಾಳಕ್ಕಾಗಲಿ ಹರಿದು ಸಂಯೋಗವಾಗುತ್ತದೆ. ಇಲ್ಲಿ ಪ್ರತ್ಯೇಕ ಗ್ಯಾಮೀಟುಗಳು ಕಂಡು ಬರುವುದಿಲ್ಲ. ಇಂಥ ಯೋಗಕ್ಕೆ ಏಪ್ಲನೋಗಮಿ ಅಥವಾ ಕಾಂಜುಗೇಷನ್ ಎಂದು ಹೆಸರು. ಡೈಆಟಮ್ ಎಂಬ ಏಕಕಣ ಆಲ್ಗೆಗಳಲ್ಲಿ ಅಕ್ಸೋಸ್ಪೋರ್ ಎಂಬ ಪ್ರತ್ಯೇಕ ಸ್ಪೋರುಗಳ ಸಹಾಯದಿಂದ ಸಂತಾನಾಭಿವೃದ್ಧಿಯಾಗುತ್ತದೆ. ಕಂದು ಅಲ್ಗೆಗಳ ಪೊಕೇಲಿಸ್ ಶ್ರೇಣಿಯಲ್ಲಿ ಅಂಡಗಳು ಸಹ ಅಂಡಕೋಶದಿಂದ ಹೊರಬಂದು ಬಾಹ್ಯ ಸಂಯೋಗ ಆಗುತ್ತದೆ. ಕೆಂಪು ಆಲ್ಗೆಗಳಲ್ಲಿ ಹೆಣ್ಣುಕಣ ಕಾರ್ಪೊಗೊನಿಯಂ ಎಂಬ ಪ್ರತ್ಯೇಕ ಕೋಶದಲ್ಲಿ ಜನಿಸುತ್ತದೆ. ಗಂಡುಕಣದ ಹೆಸರು ಸ್ಪರ್ಮೇಷಿಯಂ. ಇವುಗಳ ಉತ್ಪತ್ತಿ ಸ್ಪರ್ಮಟಾಂಜಿಯಂ ಎಂಬ ಕೋಶದಲ್ಲಿ. ಇವು ಚಲನರಹಿತ ಕಣಗಳು. ಸಂಯೋಗ ಕಾರ್ಪೊಗೋನಿಯಂನಲ್ಲಿ ಜರುಗುತ್ತದೆ. ಲಿಂಗಕಣಗಳು ಸಂಯೋಗವಾದ ಮೇಲೆ ಸಂಯೋಗಾಂಡ ಕೆಲವು ಸಲ ಸುಪ್ತಾವಸ್ಥೆಯಲ್ಲಿರುತ್ತದೆ. ಆಮೇಲೆ ಇವುಗಳಲ್ಲಿ ವಿಭಜನೆ ಹೊಂದಿ eóÉೂವೊಸ್ಪೋರುಗಳು ಉತ್ಪತ್ತಿಯಾಗಬಹುದು ಅಥವಾ ನೇರವಾಗಿ ಸಂಯೋಗಾಂಡ ಬೇರೆ ಗಿಡವಾಗಿ ಬೆಳೆಯಬಹುದು. ಕೆಂಪು ಆಲ್ಗೆಗಳಲ್ಲಿ ಸಂಯೋಗಾಂಡ ಕಾರ್ಪೊಸ್ಪೋರು ಎಂಬ ಸ್ಪೋರುಗಳನ್ನು ಉತ್ಪತ್ತಿ ಮಾಡುತ್ತದೆ. ಇವು ಒಂದೊಂದೊ ಬೇರೆ ಸಸ್ಯವನ್ನು ಕೊಡುತ್ತವೆ. ಕೆಲವು ಕೆಂಪು ಆಲ್ಗೆಗಳಲ್ಲಿ ಕಾರ್ಪೊಸ್ಪೋರುಗಳು ಪ್ರತ್ಯೇಕ ಪೀಳಿಗೆಯನ್ನುಂಟುಮಾಡುತ್ತವೆ. ಇವುಗಳಿಂದ ಟೆಟ್ರಸ್ಪೋರುಗಳು ಉತ್ಪತ್ತಿಯಾಗಿ ಇವುಗಳಿಂದ ಮತ್ತೆ ಬೇರೆ ಸಸ್ಯ ಅಭಿವೃದ್ಧಿಯಾಗುವುದು. 

ಜೀವನಚಕ್ರ : ಅನೇಕ ಆಲ್ಗೆಗಳಲ್ಲಿ ಜೀವನಚಕ್ರ ಸಂತಾನಾಭಿವೃದ್ದಿಯ ಥಾಲಸ್ಸು ಮತ್ತು ಸಂಯೋಗಾಂಡದೊಡನೆ ಕೊಡಿವೆ. ಅಂದರೆ ಜೀವನಚಕ್ರದಲ್ಲಿ ಕೇವಲ ಒಂದೇ ಪೀಳಿಗೆ (ಜನರೇಷನ್) ಇದೆ. ಆದರೆ ಕ್ಲಡಾಪೋರ, ಎಕ್ಟೊಕಾರ್ಪಸ್ ಮುಂತಾದ ಅನೇಕ ಆಲ್ಗೆಗಳಲ್ಲಿ ಒಂದಕ್ಕಿಂತ ಹೆಚ್ಚು ಪೀಳಿಗೆಗಳು ಜೀವನಚಕ್ರದಲ್ಲಿ ಕಂಡುಬರುತ್ತವೆ. ಈ ಪೀಳಿಗೆಗಳು ಒಂದಾದ ಮೇಲೆ ಮತ್ತೊಂದು ಪರ್ಯಾಯಗೊಳ್ಳುತ್ತವೆ. ಲಿಂಗಕಣಗಳನ್ನು ಉತ್ಪತ್ತಿಮಾಡುವ ಪೀಳಿಗೆಗೆ ಗ್ಯಾಮೀಟೊಫೈಟು ಪೀಳಿಗೆ ಎಂದೂ ಸ್ಪೋರುಗಳನ್ನು ಉತ್ಪತ್ತಿ ಮಾಡುವ ಪೀಳಿಗೆಗೆ ಸ್ಪೋರೋಫೈಟಿಕ್ ಪೀಳಿಗೆ ಎಂದೂ ಹೆಸರು. ಈ ಪೀಳಿಗೆಗಳ ಪರ್ಯಾಯಕ್ಕೆ ಪೀಳಿಗೆಗಳ ಪರ್ಯಾಯ ಕ್ರಮ ಎಂದು ಹೆಸರು. ಕ್ಲಡಾಪೋರ, ಎಕ್ಟೊಕಾರ್ಪಸ್ ಮುಂತಾದ ಆಲ್ಗೆಗಳಲ್ಲಿ ಎರಡು ಪೀಳಿಗೆಗಳಲ್ಲಿನ ಥಾಲಸ್ಸು ಒಂದೇ ವಿಧವಾಗಿರುತ್ತದೆ. ಆದ್ದರಿಂದ ಇಂಥ ಪರ್ಯಾಯಕ್ಕೆ ಸಮರೂಪ ಪರ್ಯಾಯ (ಐಸೊಮಾರ್ಫಿಕ್ ಆಲ್ಟರ್ನೇಷನ್) ಎಂದು ಹೆಸರು. ಲ್ಯಾಮಿನೇರಿಯ, ಡಿಕ್ಟಿಯೋಟ ಮುಂತಾದ ಆಲ್ಗೆಗಳಲ್ಲಿ ಗ್ಯಾಮಿಟೊ ಫೈಟು ಪೀಳಿಗೆಯಲ್ಲಿ ಥಾಲಸ್ಸು ಪ್ರಧಾನ. ಸ್ಪೋರೋಫೈಟಿನ ಥಾಲಸ್ಸು ಚಿಕ್ಕದು. ಆದ್ದರಿಂದ ಇದಕ್ಕೆ ಅಸಮರೂಪ ಪರ್ಯಾಯ (ಹೆಟರೊಮಾರ್ಫಿಕ್ ಆಲ್ಟರ್ನೇಷನ್) ಎಂದು ಹೆಸರು. 

ಕೆಲವು ಕೆಂಪು ಆಲ್ಗೆಗಳಲ್ಲಿ ಕಾರ್ಪೊಸ್ಪೋರೋಫೈಟ್ ಎಂಬ ಪೀಳಿಗೆ ಜೀವಿಗಳು ಗ್ಯಾಮಿಟೊಫೈಟ್ ಪೀಳಿಗೆಯ ಮೇಲೆ ಪರಾವಲಂಬಿಯಾಗಿರುತ್ತವೆ. ಪಾಲಿಸೈಫೋನಿಯ ಮುಂತಾದ ಕೆಂಪು ಆಲ್ಗೆಗಳ ಜೀವನಚಕ್ರದಲ್ಲಿ ಮೂರು ಪೀಳಿಗೆಗಳಿವೆ. ಗ್ಯಾಮಿಟೊಫೈಟಿನ ಮೇಲೆ ಕಾರ್ಪೊಸ್ಪೋರೋಫೈಟ್ ಪೀಳಿಗೆ ಇರುತ್ತದೆ. ಇದರಿಂದ ಕಾರ್ಪೊಸ್ಪೋರುಗಳು ಉತ್ಪತ್ತಿಯಾಗುತ್ತವೆ. ಈ ಸ್ಪೋರುಗಳು ಟೆಟ್ರಸ್ಪೋರೋಫೈಟ್ ಎಂಬ ಮತ್ತೊಂದು ಪೀಳಿಗೆಯನ್ನುಂಟುಮಾಡುತ್ತವೆ. ಇವುಗಳಲ್ಲಿ ಟೆಟ್ರಸ್ಪೋರುಗಳುಂಟಾಗಿ ಅವುಗಳಿಂದ ಗ್ಯಾಮಿಟೊಫೈಟುಗಳಾಗುತ್ತವೆ. 

ಆರ್ಥಿಕ ಉಪಯೋಗ : ಆಲ್ಗೆ ಸಸ್ಯಗಳ ಪ್ರತ್ಯಕ್ಷ ಮತ್ತು ಪರೋಕ್ಷ ಉಪಯೋಗಗಳು ಹಲವಾರು. ಭೂಮಿಯಲ್ಲಿ ಜರಗುವ ದ್ಯುತಿಸಂಶ್ಲೇಷಣಕ್ರಿಯೆಯ ಬಹುಭಾಗ ಆಲ್ಗೆಗಳಿಂದಲೇ ಆಗುತ್ತದೆ. ಮಾನವರಿಗೆ ಉಪಯುಕ್ತವಾದ ಅನೇಕ ಜಲಚರಗಳ ಆಹಾರ ಅಲ್ಗೆ. ಸತ್ತು ಕೊಳೆತ ಆಲ್ಗೆಗಳ ಅವಶೇಷ ಉತ್ತಮ ಸಾವಯುವ ಗೊಬ್ಬರ. ನೀಲಿ ಹಸಿರು ಆಲ್ಗೆಗಳು ಕೆಲವು ಗಾಳಿಯಲ್ಲಿನ ನೈಟ್ರೊಜನ್ನನ್ನು ನೈಟ್ರೇಟ್ ಗೊಬ್ಬರವಾಗಿ ಪರಿವರ್ತಿಸುವ ಶಕ್ತಿ ಹೊಂದಿವೆ. ಆದ್ದರಿಂದ ಬತ್ತ ಮುಂತಾದ ಬೆಳೆಗಳ ಜೊತೆಯಲ್ಲಿ ಈ ಆಲ್ಗೆಗಳು ಸೇರಿದ್ದರೆ ನೈಟ್ರೊಜನ್ ಗೊಬ್ಬರ ಇವುಗಳಿಗೆ ಒದಗುತ್ತದೆ. 

ಪ್ರಾಚ್ಯದೇಶಗಳಲ್ಲಿ ಆಲ್ಗೆಗಳನ್ನು ಮನುಷ್ಯರು ತಿನ್ನುವುದಿದೆ. ಪಾರ್ಪೈರಾ, ರೊಡಿಮೀನಿಯ, ಗ್ಲಾಸಿಲೇರಿಯ ಮುಂತಾದುವು ಈ ಪ್ರಭೇದಗಳು. ಕ್ಲೊರೆಲ್ಲ ಆಲ್ಗೆಯ ಪುಡಿ ರಾಕೆಟ್‍ಯಾನದಲ್ಲಿ ಬಳಕೆಯಾಗುವ ಆಹಾರ. ಇದು ಉತ್ತಮ ಬಲವರ್ಧಕ ಆಹಾರ. ಕ್ಲೊರೆಲ್ಲವನ್ನು ಪರಿಶೋಧನೆಯಲ್ಲಿಯೂ ಬಹಳವಾಗಿ ಬಳಸುತ್ತಾರೆ. ಕಾಂಡ್ರಸ್ ಮತ್ತು ಜೆಲಿಡಿಯಂ ಎಂಬ ಆಲ್ಗೆಗಳಲ್ಲಿ ಬರುವ ಲೋಳೆಯಂಥ ವಸ್ತುವನ್ನು ಸಿಹಿತಿಂಡಿಗಳು ಮತ್ತು ಐಸ್‍ಕ್ರೀಮ್ ತಯಾರಿಕೆಗೆ ಉಪಯೋಗಿಸುತ್ತಾರೆ. ಲ್ಯಾಮಿನೇರಿಯ ಮತ್ತು ಅಲೇರಿಯ ಮುಂತಾದ ಆಲ್ಗೆಗಳಿಂದ ಕೊಂಬು ಎಂಬ ಆಹಾರವನ್ನು ಜಪಾನೀಯರು ತಯಾರಿಸುತ್ತಾರೆ. ಸಮುದ್ರದ ಈ ಆಲ್ಗೆಗಳನ್ನು ತಂದು ಒಣಗಿಸುತ್ತಾರೆ. ಆ ಮೇಲೆ ಸಿಹಿ ನೀರಿನಿಂದ ಬೇಯಿಸಿ ಮತ್ತೆ ಒಣಗಿಸುತ್ತಾರೆ. ಇವುಗಳ ಅಲಗುಗಳನ್ನು ಹರಡಿ ಮರದ ಹಲಗೆಗಳಿಂದ ಒತ್ತುತ್ತಾರೆ. ಇವುಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ವಿನಿಗರ್ ರಸದಲ್ಲಿ ನೆನೆಹಾಕಿ ಬಳಸುತ್ತಾರೆ. ಇದನ್ನು ಕೊಂಬು ಎಂದು ಕರೆಯುತ್ತಾರೆ. ಅನೇಕ ಸಮುದ್ರ ಕೆಲ್ಪ್ ಆಲ್ಗೆಗಳಿಂದ ಆಲ್ಚಿನ್ ಎಂಬ ಪದಾರ್ಥವನ್ನು ತಯಾರಿಸುತ್ತಾರೆ. ಇದನ್ನು ಐಸ್‍ಕ್ರೀಮ್ ತಯಾರಿಕೆ, ರಬ್ಬರ್ ಕೈಗಾರಿಕೆ, ಬಣ್ಣಗಳ ತಯಾರಿಕೆ, ಕೋಲ್ಡ್ ಕ್ರೀಮ್ ತಯಾರಿಕೆಗಳಲ್ಲಿ ಉಪಯೋಗಿಸುತ್ತಾರೆ. ಔಷಧವಾಗೂ ಪರಿಶೋಧನೆಯ ಪ್ರಯೋಗ ಶಾಲೆಗಳಲ್ಲೂ ಮಾಂಸ ಶೇಖರಣೆಯಲ್ಲೂ ಬಳಸುತ್ತಾರೆ. ಕೆಲವು ಕೆಲ್ಪ್‍ಗಳಿಂದಲೂ ಫಿಲ್ಲೊಫೋರ ಎಂಬ ಕೆಂಪು ಆಲ್ಗೆಯಿಚಿದಲೂ ಅಯೊಡೀನ್, ಪೊಟಾಷ್ ಮತ್ತು ಬ್ರೋಮಿನನ್ನು ಪಡೆಯುವುದುಂಟು. 

	ಡೈಆಟಮೇಸಿಯಸ್ ಮಣ್ಣು ನಿಕ್ಷೇಪಗಳಾಗಿ ಅಮೆರಿಕ ಮುಂತಾದ ದೇಶಗಳಲ್ಲಿ ಹೇರಳವಾಗಿ ಸಿಗುತ್ತದೆ. ಈ ಮಣ್ಣನ್ನು ಅನೇಕ ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಇದರ ಉಪಯೋಗಗಳು ಸಕ್ಕರೆ ಕಾರ್ಖಾನೆಯಲ್ಲಿ ಶೋಧಕವಸ್ತು, ಒಲೆ ಮತ್ತು ಕಾರ್ಖಾನೆಗಳ ಕುಲುಮೆಗಳನ್ನು (ಫರ್ನೇಸ್) ಕಟ್ಟುವ ಇಟ್ಟಿಗೆಗಳ ತಯಾರಿಕೆ, ಲೋಹಗಳನ್ನು ಮೆರುಗು ಮಾಡುವಿಕೆ, ಪೈಪುಗಳ ಮತ್ತು ರೆಫ್ರಿಜಿರೇಟರುಗಳ ಇನ್ಸುಲೇಟರ್, ಡೈನಮೈಟ್ ತಯಾರಿಕೆ, ಹಲ್ಲುಜ್ಜುವ ಸರಿಯ (ಪೇಸ್ಟ್) ತಯಾರಿಕೆ, ರಸ್ತೆಗಳಲ್ಲಿ ಗುರುತಿಸುವ ಬಣ್ಣದಲ್ಲಿ ಬಳಕೆ, ಪೆಟ್ರೋಲ್ ಈ ನಿಕ್ಷೇಪಗಳಿಂದುಂಟಾದುದೆಂದು ಒಂದು ಪ್ರತಿಪಾದನೆ ಇದೆ. 

	ಆಲ್ಗೆಗಳು ಮಾನವರಿಗೆ ಉಪಯುಕ್ತವಾದರೂ ಅವುಗಳಿಂದ ಕೆಲವು ತೊಂದರೆಗಳೂ ಇವೆ. ಮನೆಗಳಲ್ಲಿ ಬಚ್ಚಲು ಮತ್ತು ಬಟ್ಟೆಗಳೊಗೆಯುವ ಕಡೆ ಪಾಚಿಕಟ್ಟಿಕೊಂಡು ಜಾರುವಂತೆ ಮಾಡುವುದು ನೀಲಿ ಹಸಿರು ಆಲ್ಗೆಗಳಿಂದಲೇ. ಕುಡಿಯುವ ನೀರಿನಲ್ಲಿ ಇವು ಸೇರಿ ಒಂದು ವಿಧವಾದ ವಾಸನೆಯನ್ನು ಉಂಟುಮಾಡಿ ರುಚಿಯನ್ನು ಕೆಡಿಸಿ ಉಪಯೋಗಕ್ಕೆ ಬಾರದಂತೆ ಮಾಡುತ್ತವೆ. ನೀರಿನಲ್ಲಿ ಕೆಲವು ಆಲ್ಗೆಗಳು ಸತ್ತಾಗ ಕೊಳೆತು ಒಂದು ವಿಧವಾದ ವಿಷ ಬಿಡುಗಡೆ ಮಾಡಿ ಮೀನು ಮುಂತಾದ ಜಲಚರಗಳ ಸಾವಿಗೆ ಕಾರಣವಾಗುತ್ತವೆ. ಇಂಥ ನೀರನ್ನು ಕುಡಿಯುವ ಸಾಕು ಪ್ರಾಣಿಗಳೂ ಆರೋಗ್ಯವನ್ನು ಕೆಡಿಸಿಕೊಂಡು ಸತ್ತುಹೋಗುವ ಸಂಭವವಿದೆ. ಗೊನಿಯೊಲಾಕ್ಸಾ ಎಂಬ ಆಲ್ಗೆಯನ್ನು ಮೀನುಗಳು ನುಂಗುವುದರಿಂದ ಒಂದು ವಿಧವಾದ ವಿಷ ಉತ್ಪತ್ತಿಯಾಗುತ್ತದೆ. ಇಂಥ ಮೀನನ್ನು ಮಾನವರು ತಿನ್ನುವುದರಿಂದ ಅಪಾಯ ಉಂಟು. ಆಲ್ಗೆಗಳಿಂದಾಗುವ ಕೆಡುಕಿಗಿಂತಲೂ ಉಪಯೋಗವೇ ಹೆಚ್ಚು. ನಮಗೆ ಇವು ಆಕ್ಸಿಜನ್ನನ್ನು ದ್ಯುತಿಸಂಶ್ಲೇಷಣದ ಮೂಲಕ ಒದಗಿಸುತ್ತವೆ. ಇತ್ತೀಚೆಗೆ ಅಂತರಿಕ್ಷಯಾನದಲ್ಲಿ ಇವುಗಳ ಪಾತ್ರವನ್ನು ಗುರುತಿಸಲಾಗಿದೆ. ಇದರ ವಿಷಯವಾಗಿಯೂ ಕೈಗಾರಿಕೆಗಳಲ್ಲಿ ಇವುಗಳ ಪಾತ್ರದ ವಿಷಯವಾಗಿಯೂ ಜೀವಕ್ರಿಯೆಗಳನ್ನರಿತುಕೊಳ್ಳಲು ಅನೇಕ ಪರಿಶೋಧನೆಗಳು ಕ್ಲೊರೆಲ್ಲದಂಥ ಆಲ್ಗೆಗಳ ಮೇಲೆ ಪ್ರಪಂಚದ ಅನೇಕ ಕಡೆಗಳಲ್ಲಿ ನಡೆದಿವೆ ಮತ್ತು ನಡೆಯುತ್ತಿವೆ. 
												
(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ